ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು! ಮದುವೆ ಕಾರ್ಡ್ ಹಂಚಲು ಹೋಗಿದ್ದವರ ದುರಂತ ಅಂತ್ಯ

ಯಾದಗಿರಿ ಜಿಲ್ಲೆಯ ಸೈದಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದು ಮದುವೆ ಆಹ್ವಾನ ಪತ್ರಿಕೆ ಹಂಚಲು ತೆರಳಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯಾದಗಿರಿ ಜಿಲ್ಲೆಯ ಸೈದಾಪುರ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತ ಒಂದು ಕುಟುಂಬದ ಸಂಭ್ರಮವನ್ನು ಕ್ಷಣಾರ್ಧದಲ್ಲಿ ಶೋಕಕ್ಕೆ ತಳ್ಳಿದೆ. ಮದುವೆ ಆಹ್ವಾನ ಪತ್ರಿಕೆ ಹಂಚಲು ಬೈಕ್‌ನಲ್ಲಿ ತೆರಳಿದ್ದ ಇಬ್ಬರು ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಗೌಡಗೇರಾ ಗ್ರಾಮದ ಶಿವರಾಜ್ (60) ಹಾಗೂ ಬಸವಲಿಂಗ (28) ಎಂದು ಗುರುತಿಸಲಾಗಿದೆ. ಸಂಬಂಧಿಕರ ಮದುವೆ ಹಿನ್ನೆಲೆಯಲ್ಲಿ ಆಹ್ವಾನ ಪತ್ರಿಕೆಗಳನ್ನು ನೀಡಲು ಇಬ್ಬರೂ ಬೆಳಿಗ್ಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಕಡೇಚೂರು ಗ್ರಾಮದ ಹೊರವಲಯದ 150ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳು ಸಾಗಿಸುತ್ತಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಇಬ್ಬರೂ ರಸ್ತೆಯಲ್ಲೇ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ರಕ್ಷಿಸಲು ಧಾವಿಸಿದರೂ ಇಬ್ಬರ ಪ್ರಾಣ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ. ಘಟನೆ ಬಳಿಕ ಟ್ರಾಕ್ಟರ್ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈ ದುರ್ಘಟನೆ ಸುದ್ದಿ ಗ್ರಾಮಕ್ಕೆ ತಲುಪುತ್ತಿದ್ದಂತೆಯೇ ಮದುವೆ ಸಂಭ್ರಮದ ಮನೆ ದುಃಖದ ಮನೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸೈದಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳೀಯರು ಅಕ್ರಮ ಮರಳು ಸಾಗಾಟ ಹಾಗೂ ನಿರ್ಲಕ್ಷ್ಯ ವಾಹನ ಚಾಲನೆಯೇ ಇಂತಹ ಅಪಘಾತಗಳಿಗೆ ಪ್ರಮುಖ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾದ ಟ್ರಾಕ್ಟರ್ ಚಾಲಕನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories