ಕೊಡಗಿನಲ್ಲಿ ದುರಂತ ಅಂತ್ಯ; ಶೌಚಾಲಯದ ಗುಂಡಿಗೆ ಬಿದ್ದು ಇಬ್ಬರು ಸಾವು
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸತೋಟ ಗ್ರಾಮದಲ್ಲಿ ಹಳೆಯ ಶೌಚಾಲಯದ ಗುಂಡಿ ಕುಸಿದು ಇಬ್ಬರು ಅದರೊಳಗೆ ಬಿದ್ದಿದ್ದು, ವಿಷಕಾರಿ ಅನಿಲದಿಂದ ಇಬ್ಬರೂ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

- ಕೊಡಗು ಜಿಲ್ಲೆಯ ಹೊಸತೋಟ ಗ್ರಾಮದಲ್ಲಿ ದುರಂತ
- ಶೌಚಾಲಯದ ಗುಂಡಿ ಕುಸಿದು ಇಬ್ಬರು ಸಾವು
- ವಿಷಕಾರಿ ಅನಿಲ ಸೇವಿಸಿ ಜನಾರ್ದನ, ನಿತ್ಯ ಮೃತ್ಯು
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸತೋಟ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದ ದುರ್ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಹಳೆಯ ಶೌಚಾಲಯದ ಗುಂಡಿ ಏಕಾಏಕಿ ಕುಸಿದ ಪರಿಣಾಮ ಮಹಿಳೆಯೊಬ್ಬರು ಅದರೊಳಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಮುಂದಾದ ವ್ಯಕ್ತಿಯೂ ವಿಷಕಾರಿ ಅನಿಲದ ಪರಿಣಾಮ ಸಾವನ್ನಪ್ಪಿದ್ದಾರೆ.
ಮೃತರನ್ನು ಗ್ರಾಮದ ನಿತ್ಯ (46) ಮತ್ತು ಜನಾರ್ದನ (43) ಎಂದು ಗುರುತಿಸಲಾಗಿದೆ. ನಿತ್ಯ ಅವರು ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ರಕ್ಷಿಸಲು ಹೋದಾಗ ದುರಂತ
ನಿತ್ಯ ಅವರಿಗೆ ಮನೆಗೆ ಬೇಕಾಗಿದ್ದ ಸ್ವಲ್ಪ ಶುಂಠಿಯನ್ನು ಗದ್ದೆಯಿಂದ ತರಲು ತೆರಳಿದ್ದರು. ಗದ್ದೆಯ ಸಮೀಪದಲ್ಲಿದ್ದ ಹಳೆಯ ಶೌಚಾಲಯದ ಗುಂಡಿಯ ಮೇಲ್ಭಾಗ ಏಕಾಏಕಿ ಕುಸಿದಿದ್ದು, ಅವರು ಗುಂಡಿಯೊಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಇದನ್ನು ಗಮನಿಸಿದ ಜನಾರ್ದನ ಅವರು ನಿತ್ಯ ಅವರನ್ನು ರಕ್ಷಿಸುವ ಉದ್ದೇಶದಿಂದ ಗುಂಡಿಯೊಳಗೆ ಇಳಿದಿದ್ದಾರೆ. ಆದರೆ ಒಳಗೆ ಸಂಗ್ರಹವಾಗಿದ್ದ ವಿಷಕಾರಿ ಅನಿಲದಿಂದಾಗಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಪೊಲೀಸರ ಪರಿಶೀಲನೆ
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮಡಿಕೇರಿ ಶಾಸಕ ಮಂತರ್ ಗೌಡ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಹಳೆಯ ಶೌಚಾಲಯದ ಗುಂಡಿ ಕುಸಿದಿರುವುದು ಹಾಗೂ ವಿಷಕಾರಿ ಅನಿಲದ ಪರಿಣಾಮ ಇಬ್ಬರು ಮೃತಪಟ್ಟಿರುವ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



