ಈರುಳ್ಳಿ ಬಳಿಕ ತರಕಾರಿಗೂ ಬೆಲೆ ಏರಿಕೆ ಬಿಸಿ! ಗ್ರಾಹಕರು ಕಂಗಾಲು, ವ್ಯಾಪಾರಿಗಳು ಕಳವಳ
Vegetable Prices Surge: ಮುಂಗಾರು ಮಳೆ ಕೊರತೆ ಮತ್ತು ಬೆಳೆ ಇಳಿಕೆಯಿಂದ ಬೆಂಗಳೂರಿನ ಮಾರುಕಟ್ಟೆಯಲ್ಲಿ ತರಕಾರಿ ದರ ಏರಿಕೆಯಾಗಿದೆ. ಹಬ್ಬದ ಸಿದ್ಧತೆಯ ನಡುವೆ ಗ್ರಾಹಕರು ಖರೀದಿ ಪ್ರಮಾಣ ಕಡಿಮೆ ಮಾಡುತ್ತಿದ್ದರೆ ವ್ಯಾಪಾರಿಗಳಿಗೂ ಮಾರಾಟ ಕುಸಿತದ ಆತಂಕ ಎದುರಾಗಿದೆ.

Vegetable Prices Surge: ಆಷಾಢ ಮುಗಿದು ಶ್ರಾವಣ ಆರಂಭವಾಗುತ್ತಿದ್ದಂತೆ ಹಬ್ಬ-ಹರಿದಿನಗಳ ಸಂಭ್ರಮ ಶುರುವಾಗಿದೆ. ಆದರೆ ಈ ಬಾರಿ ಮಳೆಯ ಕೊರತೆ (Rain Deficit) ಜನರ ಸಂಭ್ರಮದ ನಡುವೆ ಬೆಲೆ ಏರಿಕೆಯ ಬಿಸಿಯನ್ನೂ ತಂದಿದೆ. ಅಕ್ಕಿ, ಸಕ್ಕರೆ, ಬೆಲ್ಲ ಸೇರಿದಂತೆ ದಿನಬಳಕೆಯ ಹಲವು ವಸ್ತುಗಳ ದರ ಹೆಚ್ಚಾಗಿರುವ ಬೆನ್ನಲ್ಲೇ ಇದೀಗ ತರಕಾರಿ ಬೆಲೆಯೂ ಗ್ರಾಹಕರಿಗೆ ಹೊರೆ ಎನಿಸುತ್ತಿದೆ.
ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದು ಕೃಷಿ ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ. ಹಲವು ಪ್ರದೇಶಗಳಲ್ಲಿ ಬೆಳೆ ಪ್ರಮಾಣ ಕಡಿಮೆಯಾಗಿದ್ದು, ಮಾರುಕಟ್ಟೆಗೆ ಬರುವ ತರಕಾರಿಗಳ ಪ್ರಮಾಣದಲ್ಲೂ ಇಳಿಕೆ ಕಂಡುಬರುತ್ತಿದೆ. ಇದರ ಪರಿಣಾಮವಾಗಿ ಹಿಂದೆ ₹30–₹40ರ ಆಸುಪಾಸಿನಲ್ಲಿ ಸಿಗುತ್ತಿದ್ದ ಕೆಲವು ತರಕಾರಿಗಳು ಇದೀಗ ₹60ರಿಂದ ₹80ರ ವರೆಗೆ ಮಾರಾಟವಾಗುತ್ತಿವೆ.
ಬೆಲೆ ಏರಿಕೆಯ ಪರಿಣಾಮ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿ ಕ್ರಮವೂ ಬದಲಾಗಿದೆ. ಒಂದು ಕೆಜಿ ತರಕಾರಿ ಖರೀದಿಸುತ್ತಿದ್ದವರು ಈಗ ಅರ್ಧ ಕೆಜಿ ಅಥವಾ ಕಾಲು ಕೆಜಿಗೆ ಸೀಮಿತವಾಗುತ್ತಿದ್ದಾರೆ. ಅಡುಗೆಗೆ ತರಕಾರಿ ಬೇಕು, ಆದರೆ ಬೆಲೆ ನೋಡಿದರೆ ಹೆಚ್ಚು ಪ್ರಮಾಣದಲ್ಲಿ ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಹಲವರ ಅಳಲು.
ಇತ್ತ ವ್ಯಾಪಾರಿಗಳ ಸ್ಥಿತಿಯೂ ಭಿನ್ನವಾಗಿಲ್ಲ. ತರಕಾರಿ ಬೆಲೆ ಹೆಚ್ಚಾದಂತೆ ಗ್ರಾಹಕರು ಮಾರುಕಟ್ಟೆಗೆ ಬರುವ ಪ್ರಮಾಣ ಕಡಿಮೆಯಾಗುತ್ತಿದೆ. ದರ ಹೆಚ್ಚಳದಿಂದ ಮಾರಾಟದ ಮೇಲೆ ಪರಿಣಾಮ ಬೀರುತ್ತಿದ್ದು, ಗ್ರಾಹಕರ ಜೊತೆಗೆ ವ್ಯಾಪಾರಿಗಳೂ ಸಂಕಷ್ಟ ಎದುರಿಸುವಂತಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಬೆಂಗಳೂರಿನಲ್ಲಿ ತರಕಾರಿಗಳ ದರ ಎಷ್ಟಿದೆ?
ಬೆಂಗಳೂರಿನ ಹೋಲ್‌ಸೇಲ್ ಮತ್ತು ರಿಟೇಲ್ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಸದ್ಯದ ಮಾರುಕಟ್ಟೆ ದರದ ಪ್ರಕಾರ ಶುಂಠಿ ಕೆಜಿಗೆ ₹120–₹130, ಬೆಳ್ಳುಳ್ಳಿ ₹230–₹250, ಬೀನ್ಸ್ ₹100–₹110ರಷ್ಟಿದೆ.
ಹಸಿಬಟಾಣಿ ಮತ್ತು ಹಸಿಮೆಣಸಿನಕಾಯಿ ತಲಾ ₹80–₹90, ಈರುಳ್ಳಿ ₹50–₹70, ನುಗ್ಗೆಕಾಯಿ ₹90–₹100ರ ನಡುವೆ ಮಾರಾಟವಾಗುತ್ತಿದೆ. ಟೊಮೇಟೊ ಮಾತ್ರ ₹25–₹30ರ ಆಸುಪಾಸಿನಲ್ಲಿ ಲಭ್ಯವಿದೆ.
ಕ್ಯಾರೆಟ್ ಮತ್ತು ಬೀಟ್‌ರೂಟ್ ₹60–₹70, ಕ್ಯಾಪ್ಸಿಕಂ ₹70–₹80, ಹೀರೆಕಾಯಿ ₹60–₹80ರಷ್ಟಿದೆ. ಬೆಂಡೆಕಾಯಿ ಹಾಗೂ ಬದನೆಕಾಯಿ ₹50–₹60, ಹಾಗಲಕಾಯಿ ₹40–₹50ರ ನಡುವೆ ಇದೆ.
ಹೂಕೋಸು ₹40–₹50, ಎಲೆಕೋಸು ₹50–₹60 ಮತ್ತು ಮೂಲಂಗಿ ₹40–₹50ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ತರಕಾರಿಗಳ ಪೈಕಿ ಕೆಲವು ದರಗಳು ಈಗಾಗಲೇ ₹100ರ ಸಮೀಪಕ್ಕೆ ಬಂದಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.
ಮನೆ ಸಮೀಪದ ಚಿಲ್ಲರೆ ಅಂಗಡಿಗಳಿಗಿಂತ ಕೆ.ಆರ್. ಮಾರ್ಕೆಟ್‌ನಲ್ಲಿ ಕೆಲವೊಂದು ತರಕಾರಿಗಳು ಕಡಿಮೆ ದರದಲ್ಲಿ ಸಿಗುತ್ತವೆ ಎಂಬ ಕಾರಣಕ್ಕೆ ಗ್ರಾಹಕರು ಅಲ್ಲಿಗೆ ತೆರಳುತ್ತಿದ್ದಾರೆ. ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ತಾಜಾ ತರಕಾರಿಗಳು ಕಡಿಮೆ ಬೆಲೆಗೆ ಸಿಗುತ್ತವೆ ಎಂಬುದು ಅವರ ಅಭಿಪ್ರಾಯ.
ಒಟ್ಟಿನಲ್ಲಿ ಮಳೆ ಕೊರತೆ ಕೃಷಿ ಉತ್ಪಾದನೆಗೆ ಹೊಡೆತ ನೀಡಿರುವುದರಿಂದ ಅದರ ಪರಿಣಾಮ ನಿಧಾನವಾಗಿ ಮಾರುಕಟ್ಟೆಯಲ್ಲೂ ಕಾಣಿಸಿಕೊಳ್ಳುತ್ತಿದೆ. ಹಬ್ಬದ ದಿನಗಳು ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ತರಕಾರಿ ದರ ಇನ್ನಷ್ಟು ಏರಿಕೆಯಾಗುತ್ತದೆಯೇ ಎಂಬ ಚಿಂತೆ ಗ್ರಾಹಕರಲ್ಲಿದ್ದು, ವ್ಯಾಪಾರಿಗಳೂ ಮುಂದಿನ ದಿನಗಳ ಮಾರಾಟದ ಬಗ್ಗೆ ಆತಂಕದಲ್ಲಿದ್ದಾರೆ.



