ಪತಿಯನ್ನೇ ಕೊಲ್ಲಿಸಲು 2 ಲಕ್ಷ ಸುಪಾರಿ; ಪತ್ನಿ, ಪ್ರಿಯಕರ ಸೇರಿ ಮೂವರು ಅರೆಸ್ಟ್!
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣೆಹಳ್ಳಿ ಹೊಸೂರಿನಲ್ಲಿ ಪತ್ನಿ ಹಾಗೂ ಪ್ರಿಯಕರ ಸೇರಿ ಪತಿಯನ್ನು ಹತ್ಯೆ ಮಾಡಿಸಿದ ಆರೋಪ ಕೇಳಿಬಂದಿದ್ದು, ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ (Davanagere): ಪತಿಯನ್ನೇ ಹತ್ಯೆ ಮಾಡಿಸಲು ಪತ್ನಿಯೊಬ್ಬರು ತನ್ನ ಪ್ರಿಯಕರನ ಜೊತೆ ಸೇರಿ ಸುಪಾರಿ ನೀಡಿದ ಆರೋಪದ ಪ್ರಕರಣ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣೆಹಳ್ಳಿ ಹೊಸೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಗ್ರಾಮದ ಬಸವರಾಜ್ (37) ಎಂದು ಗುರುತಿಸಲಾಗಿದೆ. ಅವರ ಪತ್ನಿ ಸುನೀತಾ ಹಾಗೂ ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ ಪ್ರಮುಖ ಆರೋಪಿಗಳಾಗಿದ್ದಾರೆ. ಪತಿ ಮತ್ತು ಪತ್ನಿಯ ನಡುವೆ ಕೆಲ ವಿಚಾರಗಳಿಗೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು, ಸುನೀತಾಗೆ ತಿಪ್ಪೇಸ್ವಾಮಿ ಜೊತೆ ಸಂಬಂಧವಿದೆ ಎಂಬ ವಿಚಾರ ತಿಳಿದ ಬಳಿಕ ಮನೆಯಲ್ಲಿ ಮತ್ತಷ್ಟು ಕಲಹ ಉಂಟಾಗಿತ್ತು.
ಈ ಹಿನ್ನೆಲೆಯಲ್ಲೇ ಬಸವರಾಜ್ ಅವರನ್ನು ದಾರಿ ಮಧ್ಯೆ ಕರೆದುಕೊಂಡು ಹೋಗಿ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಸಾಲ ಕೊಡಿಸುವುದಾಗಿ ನಂಬಿಸಿ ಬಸವರಾಜ್ ಅವರನ್ನು ದೊಣೆಹಳ್ಳಿ ಕ್ರಾಸ್ನಿಂದ ಕಾರಿನಲ್ಲಿ ಕರೆದೊಯ್ದ ಆರೋಪಿಗಳು, ಬಳಿಕ ಅವರನ್ನು ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಕೃತ್ಯಕ್ಕಾಗಿ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಹಂತಕರಿಗೆ ₹2 ಲಕ್ಷ (Supari Killing) ನೀಡಲು ಒಪ್ಪಿಕೊಂಡಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಪೊಲೀಸರಿಗೆ ಲಭಿಸಿದೆ.
ಕೊಲೆ ನಡೆದ ಬಳಿಕ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನವೂ ನಡೆದಿತ್ತು ಎನ್ನಲಾಗಿದೆ. ಪತಿ ಕಾಣೆಯಾಗಿದ್ದಾರೆ ಎಂದು ಸುನೀತಾ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪ್ರಕರಣದ ತನಿಖೆ ಮುಂದುವರಿದಂತೆ ಪೊಲೀಸರಿಗೆ ಹಲವು ಅನುಮಾನಗಳು ಮೂಡಿವೆ.
ತಾಂತ್ರಿಕ ಮಾಹಿತಿಯನ್ನು (Technical Evidence) ಪರಿಶೀಲಿಸಿದ ಪೊಲೀಸರು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಹಲವು ಅಂಶಗಳು ಬಯಲಿಗೆ ಬಂದಿವೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಓಂಕಾರಪ್ಪ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.
ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮತ್ತಿಬ್ಬರು ಆರೋಪಿಗಳು ಸದ್ಯ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಜಗಳೂರು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಹತ್ಯೆಯಲ್ಲಿ ಭಾಗಿಯಾಗಿರುವವರ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ.
ಒಟ್ಟಿನಲ್ಲಿ, ಕೌಟುಂಬಿಕ ಕಲಹದ ನಡುವೆ ಆರಂಭವಾದ ಸಂಬಂಧದ ವಿಚಾರ ಕೊನೆಗೆ ಪತಿಯ ಹತ್ಯೆಗೆ ಸುಪಾರಿ ನೀಡುವ ಮಟ್ಟಕ್ಕೆ ತಲುಪಿರುವ ಆರೋಪ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.



