ಅಶ್ಲೀಲವಾಗಿ ಯುವಕನ ಫೋಟೋ ಎಡಿಟ್ ಮಾಡಿ ಬೆದರಿಕೆ; ₹5.24 ಲಕ್ಷ ಸುಲಿಗೆ

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿ ಯುವಕನ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಹರಡುವುದಾಗಿ ಬೆದರಿಸಿ ವಿವಿಧ ಖಾತೆಗಳಿಗೆ ₹5.24 ಲಕ್ಷ ವರ್ಗಾಯಿಸಿಕೊಂಡಿರುವ ಆರೋಪ ಕೇಳಿಬಂದಿದೆ.

  • ಅಶ್ಲೀಲ ಫೋಟೋ ಎಡಿಟ್ ಮಾಡಿ ಬೆದರಿಕೆ
  • ಯುವಕನಿಂದ ₹5.24 ಲಕ್ಷ ಸುಲಿಗೆ
  • ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು (Mangaluru): ಸಾಮಾಜಿಕ ಜಾಲತಾಣ (Social Media) ಮೂಲಕ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬ ಯುವಕನ ಭಾವಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಅದನ್ನು ಇತರರಿಗೆ ಕಳುಹಿಸುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಮಂಗಳೂರಿನ ಸೈಬರ್ ಕ್ರೈಂ (Cyber Crime) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 ವರ್ಷದ ದೂರುದಾರ ಯುವಕನಿಗೆ ಜಮ್ ಶೇದ್ ಎಂಬ ಹೆಸರಿನ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದಾನೆ. ಬಳಿಕ ತನ್ನ ಮೊಬೈಲ್ ಸಂಖ್ಯೆಯನ್ನು ನೀಡಿದ್ದು, ಜುಲೈ 19ರಂದು ಇಬ್ಬರ ನಡುವೆ ಚಾಟಿಂಗ್ ಆರಂಭವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರಂಭದಲ್ಲಿ ಅಪರಿಚಿತ ವ್ಯಕ್ತಿ ₹300 ಕಳುಹಿಸುವಂತೆ ಯುವಕನನ್ನು ಕೇಳಿದ್ದಾನೆ. ಹಣ ನೀಡಲು ಯುವಕ ನಿರಾಕರಿಸಿದ್ದರೂ, ಪದೇಪದೆ ಕರೆ ಮಾಡಿ ಒತ್ತಾಯಿಸಿದ್ದಾನೆ. ಕೊನೆಗೆ ಆತ ಕಳುಹಿಸಿದ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿ ಯುವಕ ₹300 ವರ್ಗಾಯಿಸಿದ್ದಾನೆ.

ಇದಾದ ಬಳಿಕ ಬೇರೆ ಬೇರೆ ವಾಟ್ಸ್‌ಆ್ಯಪ್ (WhatsApp) ಸಂಖ್ಯೆಗಳ ಮೂಲಕವೂ ಹಣಕ್ಕೆ ಬೇಡಿಕೆ ಇಡಲಾಗಿದೆ. ಯುವಕ ಮತ್ತೆ ಹಣ ನೀಡಲು ನಿರಾಕರಿಸಿದಾಗ, ಆತನ ಭಾವಚಿತ್ರವನ್ನು ಅಶ್ಲೀಲ ಫೋಟೋದೊಂದಿಗೆ ಎಡಿಟ್ ಮಾಡಿ ಕಳುಹಿಸಲಾಗಿದೆ. ಅಲ್ಲದೆ, ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿರುವ ಇತರ ಫಾಲೋವರ್‌ಗಳಿಗೂ ಕಳುಹಿಸುವುದಾಗಿ ಬೆದರಿಕೆ ಹಾಕಲಾಗಿದೆ.

ಬೆದರಿಕೆಯಿಂದ ಆತಂಕಗೊಂಡ ಯುವಕ ಜುಲೈ 23ರವರೆಗೆ ಆರೋಪಿಯು ಸೂಚಿಸಿದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಿದ್ದಾನೆ ಎನ್ನಲಾಗಿದೆ. ಒಟ್ಟು ₹5.24 ಲಕ್ಷ ಹಣವನ್ನು ಪಡೆದುಕೊಂಡ ಬಳಿಕವೂ ವ್ಯಕ್ತಿ ಮತ್ತೆ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದರಿಂದ ಮತ್ತಷ್ಟು ಆತಂಕಗೊಂಡ ಯುವಕ ಕೊನೆಗೆ ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಣ ವರ್ಗಾವಣೆ ಹಾಗೂ ಬಳಸಲಾದ ಮೊಬೈಲ್ ಸಂಖ್ಯೆಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories