Fish Venkat: ಟಾಲಿವುಡ್‌ನ ತೆಲುಗು ಖ್ಯಾತ ನಟ ಫಿಶ್ ವೆಂಕಟ್ ನಿಧನ

ತೆಲುಗು ಸಿನಿಮಾಗಳ ಖ್ಯಾತ ಹಾಸ್ಯನಟ ಹಾಗೂ ಖಳಪಾತ್ರಧಾರಿ ಫಿಶ್ ವೆಂಕಟ್ 54ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೆಲವು ತಿಂಗಳಿನಿಂದ ಚಿಕಿತ್ಸೆಗೆ ಒಳಗಾಗಿದ್ದರು.

  • ಫಿಶ್ ವೆಂಕಟ್ ನಿಧನ, ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು
  • ಅನೇಕ ತೆಲುಗು ಸಿನಿಮಾಗಳಲ್ಲಿ ಹಾಸ್ಯ ಹಾಗೂ ಖಳಪಾತ್ರಧಾರಿಯಾಗಿ ನಟಿಸಿದ್ದರು
  • ‘ಆದಿ’, ‘ಖುಷಿ’, ‘ಗಬ್ಬರ್ ಸಿಂಗ್’ ಮುಂತಾದ ಹಿಟ್ ಸಿನಿಮಾಗಳು ಪ್ರಮುಖ

Fish Venkat Passes Away : ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಹಾಗೂ ಖಳನಾಯಕನಾಗಿ ಗುರುತಿಸಿಕೊಂಡಿದ್ದ ಫಿಶ್ ವೆಂಕಟ್ ಅವರು 54ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಮೂತ್ರಪಿಂಡದ ಕಾಯಿಲೆಯಿಂದ ಕಳೆದ ಕೆಲವು ತಿಂಗಳುಗಳಿಂದ ಅವರು ಹೋರಾಡುತ್ತಿದ್ದು, ಡಯಾಲಿಸಿಸ್ (dialysis) ಚಿಕಿತ್ಸೆ ಪಡೆಯುತ್ತಿದ್ದರು.

ಹೈದರಾಬಾದ್ (Hyderabad) ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಶನಿವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಅನಾರೋಗ್ಯ ಕಾರಣದಿಂದ ಸಿನಿಮಾಗಳಿಂದ ದೂರವಿದ್ದ ವೆಂಕಟ್, ಚಿಕಿತ್ಸೆ ವೆಚ್ಚವನ್ನು ನಿಭಾಯಿಸಲು ಸಹಾಯ ಕೋರಿ ಮನವಿ ಮಾಡಿದ್ದರು. ಕುಟುಂಬದವರು ಸರ್ಕಾರ ಹಾಗೂ ಚಿತ್ರರಂಗದವರ ನೆರವಿಗೆ ಮೊರೆಹೋದ ನಂತರ ಹಲವರು ಸಹಾಯಹಸ್ತ ಚಾಚಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ, ಅವರು ಇಹಲೋಕ ತ್ಯಜಿಸಿದರು. ಅವರ ನಿಧನಕ್ಕೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

Fish Venkat

ಫಿಶ್ ವೆಂಕಟ್ ಅವರ ಮೂಲ ಹೆಸರು ಮಂಗಳಂಪಲ್ಲಿ ವೆಂಕಟೇಶ್. ಮುಷೀರಾಬಾದ್‌ನ ಮೀನಿನ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುತ್ತಿದ್ದ ಕಾರಣದಿಂದಲೇ ಅವರು “ಫಿಶ್ ವೆಂಕಟ್” ಎಂಬ ಹೆಸರಿನಲ್ಲಿ ಜನಪ್ರಿಯರಾದರು.

ಖ್ಯಾತ ನಿರ್ದೇಶಕ ವಿ.ವಿ. ವಿನಾಯಕ್ ಅವರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು, ‘ಆದಿ’ ಚಿತ್ರದ “ತೊಡಗೊಟ್ಟು ಚಿನ್ನ” ಎಂಬ ಡೈಲಾಗ್ ಮೂಲಕವೇ ತಕ್ಷಣವೇ ಪ್ರೇಕ್ಷಕರನ್ನು ಸೆಳೆದರು.

2000ರಲ್ಲಿ ‘ಸಮ್ಮಕ್ಕ ಸಾರಕ್ಕ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಫಿಶ್ ವೆಂಕಟ್, ‘ಖುಷಿ’, ‘ಆದಿ’, ‘ಬನ್ನಿ’, ‘ಅದುರ್ಸ್’, ‘ಗಬ್ಬರ್ ಸಿಂಗ್’, ‘ಡಿಜೆ ಟಿಲ್ಲು’ ಮುಂತಾದ ಹಲವು ಹಿಟ್ ಸಿನಿಮಾಗಳಲ್ಲಿ ಪ್ರಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು. ತೆಲಂಗಾಣ ಉಚ್ಚಾರಣೆ ಹಾಗೂ ನಿಷ್ಕಪಟ ನಗೆಕಟಾಕ್ಷದಿಂದ ಅವರು ಪ್ರೇಕ್ಷಕರ ಮನ ಗೆದ್ದಿದ್ದರು.

ಇತ್ತೀಚಿನ ‘ಸ್ಲಮ್ ಡಾಗ್ ಹಸ್ಬೆಂಡ್’, ‘ನರಕಾಸುರ’, ‘ಕಾಫಿ ವಿತ್ ಎ ಕಿಲ್ಲರ್’ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು. ಹಾಸ್ಯ ಪಾತ್ರಗಳ ಜೊತೆ ಖಳಪಾತ್ರಗಳಲ್ಲಿ ತೋರಿಸಿದ್ದ ಛಾಪು, ಚಿತ್ರರಂಗದಲ್ಲಿ ಅಪರೂಪ. ಅವರ ಅಗಲಿಕೆಯಿಂದ ಟಾಲಿವುಡ್ (Tollywood) ದಲ್ಲಿ ಖಾಲಿತನ ಉಂಟಾಗಿದೆ.

Tollywood Comedian Fish Venkat Passes Away

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories