ಅಮೆರಿಕಾ–ಇಸ್ರೇಲ್ ದಾಳಿ, ಶಾಲೆ ಮೇಲೆ ಕ್ಷಿಪಣಿ! ಇರಾನ್‌ನಲ್ಲಿ 40 ವಿದ್ಯಾರ್ಥಿನಿಯರು ಸಾವು
ಅಮೆರಿಕಾ–ಇಸ್ರೇಲ್ ಸಂಯುಕ್ತ ವೈಮಾನಿಕ ದಾಳಿಗಳ ನಡುವೆ ಇರಾನ್‌ನ ಮಿನಾಬ್ ಪಟ್ಟಣದಲ್ಲಿ ಬಾಲಕಿಯರ ಪ್ರಾಥಮಿಕ ಶಾಲೆಗೆ ಕ್ಷಿಪಣಿ ಬಿದ್ದು ಕನಿಷ್ಠ 40 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ. ಗಲ್ಫ್ ಪ್ರದೇಶದಲ್ಲಿ ಯುದ್ಧ ಆತಂಕ ಹೆಚ್ಚಾಗಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಡಿ ಮತ್ತಷ್ಟು ಭುಗಿಲೆದ್ದಿದೆ. ಅಮೆರಿಕಾ ಮತ್ತು ಇಸ್ರೇಲ್ ಸಂಯುಕ್ತವಾಗಿ ಇರಾನ್‌ನಲ್ಲಿರುವ ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ತೀವ್ರಗೊಂಡಿದೆ. ಹೋರ್ಮೋಜ್ಗಾನ್ ಪ್ರಾಂತ್ಯದ ಮಿನಾಬ್ ಪಟ್ಟಣದಲ್ಲಿ ಸೈನಿಕ ನೆಲೆ ಗುರಿಯಾಗಿದ್ದ ದಾಳಿಯ ವೇಳೆ ಸಮೀಪದ ಬಾಲಕಿಯರ ಪ್ರಾಥಮಿಕ ಶಾಲೆ ಭಾರೀ ಹಾನಿಗೊಳಗಾಗಿದೆ.
ಶಾಲೆ ಮೇಲೆ ಕ್ಷಿಪಣಿ ಬಿದ್ದು ಭಾರೀ ದುರಂತ
ಕ್ಷಿಪಣಿ ಸ್ಫೋಟದಿಂದ ಶಾಲಾ ಕಟ್ಟಡ ಸಂಪೂರ್ಣ ಹಾನಿಗೊಂಡಿದ್ದು, ಸುಮಾರು 40 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಇನ್ನೂ 45ಕ್ಕೂ ಹೆಚ್ಚು ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ.
ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ
ಈ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಕ್ಷಿಪಣಿ ದಾಳಿಗೆ ಮುಂದಾಗಿದೆ. ಇಸ್ರೇಲ್‌ನ ವಾಣಿಜ್ಯ ಕೇಂದ್ರ ಟೆಲ್ ಅವೀವ್ ಸೇರಿದಂತೆ ಹಲವು ಗುರಿಗಳನ್ನು ಇರಾನ್ ಟಾರ್ಗೆಟ್ ಮಾಡಿದೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ ಬಹ್ರೆನ್, ಅಬುಧಾಬಿ, ಖತಾರ್, ಕುವೈತ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕಾ ಸೈನಿಕ ನೆಲೆಗಳ ಮೇಲೂ ಇರಾನ್ ಕ್ಷಿಪಣಿಗಳನ್ನು ಪ್ರಯೋಗಿಸಿದೆ ಎನ್ನಲಾಗಿದೆ.
ಮಧ್ಯಪ್ರಾಚ್ಯದ ಈ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ವ್ಯಾಪಕ ಯುದ್ಧಕ್ಕೆ ದಾರಿತೀರುವ ಭೀತಿಯನ್ನು ಉಂಟುಮಾಡಿದೆ. ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ವ್ಯಕ್ತವಾಗುತ್ತಿದ್ದು, ಶಾಂತಿ ಮಾತುಕತೆಗಳ ಅಗತ್ಯತೆ ಮತ್ತೊಮ್ಮೆ ಎತ್ತಿಹಿಡಿಯಲಾಗಿದೆ.



