ಮಾನವನ ಆಯುಷ್ಯ ಹೆಚ್ಚಿಸುವ ಎಐ ತಂತ್ರಜ್ಞಾನ; 1400 ವರ್ಷ ಬದುಕಲು ಸಾಧ್ಯ!
ಮಾನವನ ವಯಸ್ಸಾಗುವ ಪ್ರಕ್ರಿಯೆಯನ್ನು ನಿಯಂತ್ರಿಸುವ ತಂತ್ರಜ್ಞಾನ ಭವಿಷ್ಯದಲ್ಲಿ ಬೆಳೆಯಬಹುದು. ಕೃತಕ ಬುದ್ಧಿಮತ್ತೆ (AI) ಜೀವಕೋಶಗಳ ಸಂರಕ್ಷಣೆಗೆ ನೆರವಾದರೆ ಮನುಷ್ಯನ ಆಯುಷ್ಯ 1400 ವರ್ಷ ತಲುಪುವ ಸಾಧ್ಯತೆಯಿದೆ ಎಂಬ ಹೊಸ ಚರ್ಚೆ ಹುಟ್ಟಿದೆ.

- ಮಾನವನ ಆಯುಷ್ಯ ಹೆಚ್ಚಿಸುವ ಎಐ ತಂತ್ರಜ್ಞಾನ
- ಜೀವಕೋಶಗಳ ಸಾವು ತಡೆಯುವ ಸಂಶೋಧನೆ
- 1400 ವರ್ಷ ಬದುಕುವ ಸಾಧ್ಯತೆ ಬಗ್ಗೆ ಚರ್ಚೆ
ಮನುಷ್ಯನ ಆಯುಷ್ಯವನ್ನು ಕೆಲವು ದಶಕಗಳಿಂದ ನೂರಾರು ವರ್ಷಗಳಿಗೆ ವಿಸ್ತರಿಸಲು ಸಾಧ್ಯವೇ? ಇಂತಹ ಪ್ರಶ್ನೆಗಳಿಗೆ ಈಗ ಕೃತಕ ಬುದ್ಧಿಮತ್ತೆ (Artificial Intelligence) ಹೊಸ ಭರವಸೆ ಮೂಡಿಸಿದೆ. ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಎಐ ಮಹತ್ವದ ಬದಲಾವಣೆ ತರಬಹುದು. ಅಷ್ಟೇ ಅಲ್ಲ, ಮಾನವರು 1200ರಿಂದ 1400 ವರ್ಷಗಳವರೆಗೆ ಬದುಕುವ ಸಾಧ್ಯತೆಯೂ ಇದೆ ಎಂಬ ಅಭಿಪ್ರಾಯವನ್ನು ಸ್ವೀಡಿಷ್ ತತ್ವಜ್ಞಾನಿ ನಿಕ್ ಬೋಸ್ಟ್ರೋಮ್ (Nick Bostrom) ವ್ಯಕ್ತಪಡಿಸಿದ್ದಾರೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕರಾಗಿರುವ ಅವರು ಇತ್ತೀಚಿನ ಪಾಡ್ಕಾಸ್ಟ್ ಸಂವಾದವೊಂದರಲ್ಲಿ ಮಾನವನ ದೀರ್ಘಾಯುಷ್ಯದ ಕುರಿತು ಮಾತನಾಡಿದ್ದಾರೆ. ವಯಸ್ಸಾಗುವುದು ಕೇವಲ ಸಹಜ ಪ್ರಕ್ರಿಯೆಯಾಗಿ ಮುಂದುವರಿಯಬೇಕೆಂದಿಲ್ಲ. ಅದಕ್ಕೆ ಕಾರಣವಾಗುವ ಜೈವಿಕ ಬದಲಾವಣೆಗಳನ್ನು ವಿಜ್ಞಾನ ಗುರುತಿಸಿ ನಿಯಂತ್ರಿಸಲು ಸಾಧ್ಯವಾದರೆ ಮನುಷ್ಯನ ಜೀವಿತಾವಧಿಯನ್ನು ಈಗಿನ ಮಿತಿಗಿಂತ ಬಹಳಷ್ಟು ಹೆಚ್ಚಿಸಬಹುದು ಎಂಬುದು ಅವರ ಅಭಿಪ್ರಾಯ.
ಜೀವಕೋಶಗಳೇ ಪ್ರಮುಖ ಕೊಂಡಿ
ಮಾನವನ ದೇಹದಲ್ಲಿರುವ ಜೀವಕೋಶಗಳು ನಿರಂತರವಾಗಿ ಬದಲಾವಣೆಗೆ ಒಳಗಾಗುತ್ತವೆ. ಕೆಲವು ಜೀವಕೋಶಗಳು ಹಾನಿಗೀಡಾಗುತ್ತವೆ, ಇನ್ನು ಕೆಲವು ನಾಶವಾಗುತ್ತವೆ. ಇಂತಹ ಬದಲಾವಣೆಗಳು ದೇಹದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ. ಕಾಲಕ್ರಮೇಣ ವಯಸ್ಸಾಗುವ ಪ್ರಕ್ರಿಯೆ ವೇಗ ಪಡೆದುಕೊಳ್ಳಲು ಇದು ಕೂಡ ಪ್ರಮುಖ ಕಾರಣವಾಗಿದೆ.
ಈ ಹಂತದಲ್ಲಿ ಎಐ ತಂತ್ರಜ್ಞಾನ ನೆರವಾಗಬಹುದು ಎಂಬುದು ಬೋಸ್ಟ್ರೋಮ್ ಅವರ ವಾದ. ದೇಹದಲ್ಲಿ ಯಾವ ಜೀವಕೋಶಗಳು ಹಾನಿಗೀಡಾಗುತ್ತಿವೆ, ಅವುಗಳ ಸಾವಿಗೆ ಕಾರಣವೇನು ಎಂಬುದನ್ನು ಎಐ ಮೂಲಕ ಹೆಚ್ಚು ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾದರೆ, ಅವುಗಳನ್ನು ರಕ್ಷಿಸುವ ಅಥವಾ ಅವುಗಳ ಕಾರ್ಯಕ್ಷಮತೆಯನ್ನು ಸುಧಾರಿಸುವ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಬಹುದು. ಇದರಿಂದ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಸಾಧ್ಯತೆ ಇದೆ.
ಇದುವರೆಗಿನ ದಾಖಲೆಗಿಂತ 11 ಪಟ್ಟು ಹೆಚ್ಚು!
ಇಲ್ಲಿಯವರೆಗೆ ಅಧಿಕೃತವಾಗಿ ದಾಖಲಾಗಿರುವ ಅತಿ ಹೆಚ್ಚು ಮಾನವ ಆಯುಷ್ಯ 122 ವರ್ಷ ಮತ್ತು 164 ದಿನಗಳು. ಫ್ರಾನ್ಸ್ನ ಜೀನ್ ಕಾಲ್ಮೆಂಟ್ (Jeanne Calment) ಈ ದಾಖಲೆಯನ್ನು ಹೊಂದಿದ್ದಾರೆ. ಆದರೆ ಬೋಸ್ಟ್ರೋಮ್ ಪ್ರಸ್ತಾಪಿಸಿರುವ 1400 ವರ್ಷಗಳ ಆಯುಷ್ಯ ಈ ದಾಖಲೆಯ ಸುಮಾರು 11 ಪಟ್ಟು ಹೆಚ್ಚಾಗಿದೆ.
ಆದರೆ ಮನುಷ್ಯರು ನಿಜವಾಗಿಯೂ ಇಷ್ಟು ವರ್ಷ ಬದುಕಲು ಸಾಧ್ಯವೇ ಎಂಬುದಕ್ಕೆ ಸದ್ಯಕ್ಕೆ ವೈಜ್ಞಾನಿಕ ದೃಢೀಕರಣವಿಲ್ಲ. ಇದು ಭವಿಷ್ಯದ ತಂತ್ರಜ್ಞಾನ ಮತ್ತು ವೈದ್ಯಕೀಯ ಬೆಳವಣಿಗೆಗಳ ಕುರಿತಾದ ಒಂದು ಊಹಾತ್ಮಕ ಅಭಿಪ್ರಾಯವಾಗಿದೆ. ಆದರೂ ವಯಸ್ಸಾಗುವ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಂಶೋಧನೆಗಳು ಮುಂದುವರಿದರೆ, ಮುಂದಿನ ತಲೆಮಾರುಗಳ ಜೀವನದ ಅವಧಿ ಮತ್ತು ಆರೋಗ್ಯದ ಗುಣಮಟ್ಟದಲ್ಲಿ ದೊಡ್ಡ ಬದಲಾವಣೆ ಕಾಣುವ ಸಾಧ್ಯತೆಯಿದೆ.



