ಬೆಂಗಳೂರು ಏರ್ಪೋರ್ಟ್ನಲ್ಲಿ ನಾಲ್ವರು ಅರೆಸ್ಟ್! ಪಾದದಡಿ 1.6 ಕೆಜಿ ಚಿನ್ನ ಸಾಗಿಸುತ್ತಿದ್ದ ಗ್ಯಾಂಗ್
ದುಬೈನಿಂದ ಬೆಂಗಳೂರಿಗೆ ಬಂದಿದ್ದ ಚೆನ್ನೈ ಮೂಲದ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಪಾದಗಳ ಕೆಳಗೆ ಕಪ್ಪು ಟೇಪ್ನಿಂದ ಬಚ್ಚಿಟ್ಟಿದ್ದ 28 ಚಿನ್ನದ ಬಾರ್ಗಳು ಸೇರಿದಂತೆ ಮೊಬೈಲ್ಗಳು, ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿದ್ದಾರೆ.

ದೇವನಹಳ್ಳಿ, ಅಕ್ಟೋಬರ್ 14: ಪಾದಗಳ ಕೆಳಗೆ ಚಿನ್ನದ ಬಾರ್ಗಳನ್ನು (Gold Bar) ಕಪ್ಪು ಟೇಪ್ನಿಂದ ಬಿಗಿಯಾಗಿ ಕಟ್ಟಿ ಸಾಗಿಸುತ್ತಿದ್ದ ನಾಲ್ವರು ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Kempegowda International Airport) ಸಿಕ್ಕಿಬಿದ್ದಿದ್ದಾರೆ. ದುಬೈನಿಂದ ಆಗಮಿಸಿದ್ದ ಈ ತಂಡವನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಪತ್ತೆಯಾಗಿದೆ.
ಚೆನ್ನೈನ ವ್ಯಾಸರ್ಪಾಡಿ ಮೂಲದ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಈ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ರಂಜಾನ್ ಬೇಗಂ ಸಿರಾಜುದ್ದೀನ್, ನಸ್ರಿನ್ ಬಾನು ಸಿರಾಜುದ್ದೀನ್, ಹೈರುನ್ ಫಾತಿಮಾ ಸಿರಾಜುದ್ದೀನ್ ಹಾಗೂ ಅಶಾರುದ್ದೀನ್ ಚೆಲ್ಲದುರೈ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಇವರಲ್ಲಿ ನಸ್ರಿನ್ ಮತ್ತು ಹೈರುನ್ ಸಹೋದರಿಯರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಿನ ರಾಜಾನುಕುಂಟೆ ರೈಲ್ವೆ ಯಾರ್ಡ್ನಲ್ಲಿ ಮೂರು ಬೋಗಿಗಳಿಗೆ ಬೆಂಕಿ
ಪಾದಗಳ ಕೆಳಗೆ ಚಿನ್ನದ ಬಾರ್ಗಳು
ಕಸ್ಟಮ್ಸ್ ಅಧಿಕಾರಿಗಳಿಗೆ ಲಭ್ಯವಾದ ಗುಪ್ತಚರ ಮಾಹಿತಿ ಮತ್ತು ಪ್ರಯಾಣಿಕರ ಪ್ರೊಫೈಲಿಂಗ್ ಆಧರಿಸಿ ವಿಮಾನ ನಿಲ್ದಾಣದ ಟರ್ಮಿನಲ್ 2ರ ನಿರ್ಗಮನ ದ್ವಾರದಲ್ಲಿ ನಾಲ್ವರನ್ನು ತಡೆದು ಪರಿಶೀಲಿಸಲಾಯಿತು. ಈ ವೇಳೆ ಅವರ ಪಾದಗಳ ಕೆಳಗೆ ಹಾಗೂ ಪಾದದ ಸುತ್ತಮುತ್ತ ಕಪ್ಪು ಟೇಪ್ನಿಂದ ಬಿಗಿಯಾಗಿ ಕಟ್ಟಲಾಗಿದ್ದ ಚಿನ್ನದ ಬಾರ್ಗಳು ಪತ್ತೆಯಾಗಿವೆ.
ತಪಾಸಣೆಯಲ್ಲಿ ಒಟ್ಟು 28 ಚಿನ್ನದ ಬಾರ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ತೂಕ ಸುಮಾರು 1.6 ಕೆ.ಜಿ. ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ ಸುಮಾರು 2.6 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಚಿನ್ನದ ಬಾರ್ಗಳು ಟ್ರಾಲಿಗಳಲ್ಲಿಯೂ ಪತ್ತೆಯಾಗಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ: ದೇವನಹಳ್ಳಿ ಬಳಿ ಭೀಕರ ಅಪಘಾತ: ಮಾಲೂರು ಬಿಜೆಪಿ ಮುಖಂಡ ಶಿವಕುಮಾರ್ ಸಾವು
ಮೊಬೈಲ್ಗಳು, ಲ್ಯಾಪ್ಟಾಪ್ಗಳೂ ವಶ
ಚಿನ್ನದ ಜೊತೆಗೆ 13 ನವೀಕರಿಸಿದ ಮೊಬೈಲ್ ಫೋನ್ಗಳು (Refurbished Mobile Phones) ಮತ್ತು ಎಂಟು ಲ್ಯಾಪ್ಟಾಪ್ಗಳನ್ನು (Laptops) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ವಸ್ತುಗಳು ಅಕ್ರಮ ಸಾಗಣೆಯೊಂದಿಗೆ ಹೇಗೆ ಸಂಬಂಧಿಸಿವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದುಬರಬೇಕಿದೆ.
ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಅಧಿಕಾರಿಗಳಿಗೆ ಸಮರ್ಪಕವಾಗಿ ಸಹಕರಿಸುತ್ತಿಲ್ಲ ಎಂದು ವರದಿಯಾಗಿದೆ. ಹೀಗಾಗಿ, ಈ ಪ್ರಕರಣದ ಹಿಂದೆ ಇನ್ನಷ್ಟು ಜನರ ಕೈವಾಡವಿದೆಯೇ ಅಥವಾ ಅಕ್ರಮ ಸಾಗಣೆಗೆ ಸಂಘಟಿತ ಜಾಲವಿದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಕಸ್ಟಮ್ಸ್ ಕಾಯ್ದೆ, 1962ರ (Customs Act, 1962) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದುಬೈನಿಂದ ಚಿನ್ನವನ್ನು ಬೆಂಗಳೂರಿಗೆ ತಂದು, ನಂತರ ಬೇರೆಡೆಗೆ ಸಾಗಿಸುವ ಉದ್ದೇಶವಿತ್ತೇ ಎಂಬುದು ಸೇರಿದಂತೆ ಹಲವು ಆಯಾಮಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ನಂತರವೇ ಈ ಜಾಲದ ಸಂಪೂರ್ಣ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



