ಪತ್ನಿಯನ್ನು ಗುಂಡಿಟ್ಟು ಕೊಂದು ಬಿಜೆಪಿ ಮುಖಂಡ ಆತ್ಮಹತ್ಯೆ

ಪಾಟ್ನಾ: ಬಿಜೆಪಿ ಮುಖಂಡನೊಬ್ಬ ತನ್ನ ಪತ್ನಿಯನ್ನು ಬಂದೂಕಿನಿಂದ ಗುಂಡಿಕ್ಕಿ ಕೊಂದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಹಾರದ ಮುಂಗೇರ್ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬಿಜೆಪಿ ಒಬಿಸಿ ಮೋರ್ಚಾ ಮುಂಗೇರ್ ಜಿಲ್ಲಾ ಉಪಾಧ್ಯಕ್ಷ ಅರುಣ್ ಯಾದವ್ ಅಲಿಯಾಸ್ ಬಡಬಾಬು ಗುರುವಾರ ಸಂಜೆ 7.45ಕ್ಕೆ ಜಮೀನಿನಿಂದ ಮನೆಗೆ ಮರಳಿದ್ದಾರೆ. ಬಳಿಕ ಪತ್ನಿ ಪ್ರೀತಿ ಕುಮಾರಿ ಜತೆ ಜಗಳವಾಡಿದ್ದರು. ಇದರಿಂದ ಕುಪಿತಗೊಂಡ ಅರುಣ್ ಯಾದವ್ ಪತ್ನಿಯ ತಲೆಗೆ ಗುಂಡು ಹಾರಿಸಿದ್ದಾನೆ. ರಕ್ತದ ಮಡುವಿನಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ನಂತರ ಅರುಣ್ ಯಾದವ್ ತನ್ನ ಮಲಗುವ ಕೋಣೆಗೆ ಹೋಗಿ ಗುಂಡು ಹಾರಿಸಿಕೊಂಡಿದ್ದಾನೆ.
ಗುಂಡಿನ ಸದ್ದು ಕೇಳಿದ ಸ್ಥಳೀಯರು ಭಯಭೀತರಾಗಿದ್ದರು. ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಪೊಲೀಸರು ಅರುಣ್ ಯಾದವ್ ಮನೆಗೆ ಬಂದು ತಪಾಸಣೆ ನಡೆಸಿದರು. ಮಲಗುವ ಕೋಣೆಯಿಂದ ಎರಡು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ದಂಪತಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮತ್ತೊಂದೆಡೆ ಅರುಣ್ ಯಾದವ್ ಪತ್ನಿ ಪ್ರೀತಿ ಕುಮಾರಿ ಮೇಯರ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದರು… ಈ ನಿಟ್ಟಿನಲ್ಲಿ ಪ್ರತಿದಿನ ಪ್ರಚಾರ ನಡೆಸುವಂತೆ ಅರುಣ್ ಯಾದವ್ ಪತ್ನಿಗೆ ಹೇಳಿದ್ದರು. ಆದರೆ, ಸ್ವಲ್ಪ ವಿಶ್ರಾಂತಿಯ ನಂತರ ಮಾಡುವುದಾಗಿ ಹೇಳಿದ್ದರಿಂದ ದಂಪತಿ ಕಳೆದ ಮೂರು ದಿನಗಳಿಂದ ಈ ವಿಚಾರವಾಗಿ ಜಗಳವಾಡುತ್ತಿದ್ದರು ಎಂದು ಅರುಣ್ ತಂದೆ ಫುಲೇಶ್ವರ್ ಯಾದವ್ ಪೊಲೀಸರಿಗೆ ತಿಳಿಸಿದ್ದಾರೆ.
Bihar Bjp Leader Dies By Suicide After Shooting Wife To Death



