ಶಾಲಾ ಶುಲ್ಕ 250 ರೂಪಾಯಿಗಾಗಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ
ಕೇವಲ 250 ರೂ. ಶಾಲಾ ಶುಲ್ಕಕ್ಕಾಗಿ 3ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಶಿಕ್ಷಕರೊಬ್ಬರು ಹೊಡೆದು ಕೊಂದಿದ್ದಾರೆ
ಲಕ್ನೋ: ಕೇವಲ 250 ರೂ. ಶಾಲಾ ಶುಲ್ಕಕ್ಕಾಗಿ 3ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಶಿಕ್ಷಕರೊಬ್ಬರು ಹೊಡೆದು ಕೊಂದಿದ್ದಾರೆ. ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಬ್ರಿಜೇಶ್ ಕುಮಾರ್ ಸಿರ್ಸಿಯಾದ ಪಂಡಿತ್ ಬ್ರಹ್ಮದತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ.
ಆದರೆ, ಎರಡು ತಿಂಗಳ ಹಿಂದೆಯೇ ಬಾಲಕ ಶಾಲೆಗೆ ಸೇರಿದ್ದ. ಮೊದಲ ತಿಂಗಳ ಶಾಲಾ ಶುಲ್ಕವಾಗಿ 250 ರೂ ಪಾವತಿಸಿದ್ದ. ಎರಡನೇ ತಿಂಗಳ ಶಾಲಾ ಶುಲ್ಕ ಪಾವತಿಯಲ್ಲಿ ಸ್ವಲ್ಪ ವಿಳಂಬವಾಗಿದೆ. ಇವರ ಕುಟುಂಬಕ್ಕೆ ಆಧಾರವಾಗಿರುವ ಅಣ್ಣ ಬೇರೆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಣ ಕಳುಹಿಸಲು ಸಾಧ್ಯವಾಗದ ಕಾರಣ ವಿದ್ಯಾರ್ಥಿ ಶಾಲಾ ಶುಲ್ಕ ಪಾವತಿಸಿರಲಿಲ್ಲ.
ಈ ನಡುವೆ ಇದೇ ತಿಂಗಳ 8ರಂದು ಶಾಲಾ ಶಿಕ್ಷಕ ಅನುಪಮ್ ಪಾಠಕ್ ಶುಲ್ಕ ಕಟ್ಟದ ವಿದ್ಯಾರ್ಥಿ ಬ್ರಿಜೇಶ್ ಕುಮಾರ್ ಮೇಲೆ ಬರ್ಬರವಾಗಿ ಥಳಿಸಿದ್ದಾರೆ. ಪರಿಣಾಮ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂಟು ದಿನಗಳ ಚಿಕಿತ್ಸೆ ನಂತರ ಬ್ರಿಜೇಶ್ ಕುಮಾರ್ ಸಾವನ್ನಪ್ಪಿದ್ದಾನೆ. ಕುಟುಂಬಸ್ಥರ ದೂರಿನ ಮೇರೆಗೆ ಶಿಕ್ಷಕ ಅನುಪಮ್ ಪಾಠಕ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎರಡು ತಿಂಗಳ ಹಿಂದೆ ಕಿರಿಯ ಸಹೋದರ ಶಾಲೆಗೆ ಸೇರಿದ್ದು, ಮೊದಲ ತಿಂಗಳ ಶುಲ್ಕವಾಗಿ ರೂ.250 ಕೂಡ ಪಾವತಿಸಿದ್ದ ಎಂದು ಮೃತನ ಅಣ್ಣ ತಿಳಿಸಿದ್ದಾರೆ. ಹಣ ಬಾರದ ಕಾರಣಕ್ಕೆ ಎರಡನೇ ತಿಂಗಳಿಗೆ ಶಾಲಾ ಶುಲ್ಕ ಪಾವತಿಸಲು ವಿಳಂಬ ಮಾಡಿದ ಕಾರಣಕ್ಕೆ ಶಿಕ್ಷಕ ತನ್ನ ಕಿರಿಯ ಸಹೋದರನನ್ನು ಹೊಡೆದು ಸಾಯಿಸಿದ್ದಾರೆ ಎಂದು ಆರೋಪಿಸಿದರು.
Class 3 student beaten to death by teacher over rs 250 school fees in uttar pradesh