ಕಣ್ಣಿಗೆ ಖಾರದ ಪುಡಿ ಎರಚಿ ಬ್ಯಾಂಕ್ ಲೂಟಿ: 4.53 ಲಕ್ಷ ಕದ್ದ ಕಳ್ಳ! ಬರಿ 30 ನಿಮಿಷಗಳಲ್ಲಿ ಸಿಕ್ಕಿ ಬಿದ್ದ
ನಾಗ್ಪುರದ ಎಸ್‌ಬಿಐ ಶಾಖೆಯಲ್ಲಿ ಉದ್ಯೋಗಿಗಳ ಕಣ್ಣಿಗೆ ಖಾರದ ಪುಡಿ ಎರಚಿ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಹಣವಿದ್ದ ಬ್ಯಾಗ್ ಕದ್ದೊಯ್ದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

- ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆ
- ಉದ್ಯೋಗಿಗಳ ಕಣ್ಣಿಗೆ ಖಾರದ ಪುಡಿ
- 4.53 ಲಕ್ಷ ಹಣ ಕದ್ದ ಆರೋಪಿ ಬಂಧನ
ನಾಗ್ಪುರ (Nagpur), ಸೆಪ್ಟೆಂಬರ್ 12: ಬ್ಯಾಂಕ್‌ಗೆ ಹಣ ತಂದುಕೊಟ್ಟಿದ್ದ ಉದ್ಯೋಗಿಗಳ ಕಣ್ಣಿಗೆ ಖಾರದ ಪುಡಿ ಎರಚಿ (Chilli Powder), ಲಕ್ಷಾಂತರ ರೂಪಾಯಿ ದೋಚಿದ ಘಟನೆ (Bank Robbery) ನಾಗ್ಪುರದಲ್ಲಿ ನಡೆದಿದೆ. ಆದರೆ ಕೃತ್ಯ ಎಸಗಿದ ಆರೋಪಿಯನ್ನು ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸರು ಕೇವಲ ಅರ್ಧ ಗಂಟೆಯೊಳಗೆ ಹಿಡಿದುಕೊಂಡಿದ್ದಾರೆ.
ನಾಗ್ಪುರದ ಎಸ್‌ಬಿಐ (SBI) ಶಾಖೆಯ ಉದ್ಯೋಗಿಗಳು ಶುಕ್ರವಾರ ಸಂಜೆ ಸುಮಾರು 5.30ಕ್ಕೆ ಎಟಿಎಂ (ATM) ನಿಂದ ಹಣ ಪಡೆದು ಬ್ಯಾಂಕ್‌ಗೆ ವಾಪಸ್ ಆಗಿದ್ದರು. ಅವರ ಬಳಿ ₹4.53 ಲಕ್ಷ ನಗದು ಇದ್ದ ಬ್ಯಾಗ್ ಕೂಡ ಇತ್ತು. ಇದೇ ಸಮಯವನ್ನು ಗಮನಿಸಿದ್ದ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ಏಕಾಏಕಿ ಬ್ಯಾಂಕ್‌ಗೆ ನುಗ್ಗಿದ್ದಾನೆ.
ಉದ್ಯೋಗಿಗಳು ಹಣದ ಬ್ಯಾಗ್ ಹಿಡಿದುಕೊಂಡು ಬರುತ್ತಿದ್ದ ವೇಳೆ ಆರೋಪಿ ಅವರ ಕಣ್ಣಿಗೆ ಖಾರದ ಪುಡಿ (Chilli Powder) ಎರಚಿದ್ದಾನೆ. ಕಣ್ಣು ಉರಿಯಿಂದ ಉದ್ಯೋಗಿಗಳು ಕಂಗಾಲಾದ ಸಂದರ್ಭವನ್ನು ಬಳಸಿಕೊಂಡು ₹4.53 ಲಕ್ಷ ನಗದು ಇದ್ದ ಬ್ಯಾಗ್ ಎತ್ತಿಕೊಂಡು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಘಟನೆ ನಡೆದ ತಕ್ಷಣ ಬ್ಯಾಂಕ್ ಸಿಬ್ಬಂದಿ ಎಚ್ಚೆತ್ತುಕೊಂಡು ಅಲಾರಂ (Alarm) ಮೊಳಗಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಕೂಡಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಬ್ಯಾಂಕ್ ಉದ್ಯೋಗಿಗಳ ಸಹಕಾರದೊಂದಿಗೆ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರು, ಕೃತ್ಯ ನಡೆದ ಕೇವಲ 30 ನಿಮಿಷಗಳೊಳಗೆ ಆತನನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ನಾಗ್ಪುರ ಜಿಲ್ಲೆಯ ಭೀವಾಪುರದ ಟಟೋಲಿ ನಿವಾಸಿ ಸೂರಜ್ ಭೋಜ್‌ರಾಜ್ ಬೋರ್ಕರ್ (Suraj Bhojraj Borkar) ಎಂದು ಪೊಲೀಸರು ಗುರುತಿಸಿದ್ದಾರೆ. ಬಿಎಸ್ಸಿ (BSc) ಪದವಿ ಪಡೆದಿರುವ ಆತ ಸದ್ಯ ನಿರುದ್ಯೋಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿದ್ದ ಆರ್ಥಿಕ ಸಂಕಷ್ಟದಿಂದಾಗಿ ಹಣ ದೋಚಲು ಈ ಕೃತ್ಯ ಎಸಗಿದ್ದಾಗಿ ಆರೋಪಿ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎಂದು ವರದಿಯಾಗಿದೆ. ಘಟನೆಯ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ದರೋಡೆಗೆ ಸಂಬಂಧಿಸಿದ ಇತರ ಅಂಶಗಳ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ.
ಲಕ್ಷಾಂತರ ರೂಪಾಯಿ ಇರುವುದನ್ನು ಗಮನಿಸಿ ಬ್ಯಾಂಕ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿದ್ದರೂ, ಕೃತ್ಯದ ಬೆನ್ನಲ್ಲೇ ಅಲಾರಂ ಮೊಳಗಿದ್ದರಿಂದ ಆರೋಪಿಗೆ ಹೆಚ್ಚು ದೂರ ಪರಾರಿಯಾಗಲು ಸಾಧ್ಯವಾಗಿಲ್ಲ. ಬ್ಯಾಂಕ್ ಸಿಬ್ಬಂದಿ ಮತ್ತು ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಹಣ ದೋಚಿದ ಆರೋಪಿಯನ್ನು ಕೆಲವೇ ನಿಮಿಷಗಳಲ್ಲಿ ಹಿಡಿಯಲಾಗಿದೆ.



