ಮಹಿಳೆಯನ್ನು ನದಿಗೆ ಎಳೆದೊಯ್ದ ಮೊಸಳೆ, ಆಘಾತಕಾರಿ ದೃಶ್ಯ ವೈರಲ್

ಒಡಿಶಾದ ಜಾಜ್‌ಪುರ್ ಜಿಲ್ಲೆಯ ನದಿತೀರ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಮೊಸಳೆ ಎಳೆದೊಯ್ದ ಘಟನೆ ಆತಂಕ ಉಂಟುಮಾಡಿದೆ. ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಒಡಿಶಾದ ಜಾಜ್‌ಪುರ್ ಜಿಲ್ಲೆಯ ಬಾರಿ ಬ್ಲಾಕ್‌ನ ಬೋಡು ಪಂಚಾಯತ್‌ ವ್ಯಾಪ್ತಿಯ ನದಿತೀರದಲ್ಲಿ ಭೀಕರ ಘಟನೆ ನಡೆದಿದೆ. 55 ವರ್ಷದ ಸೌದಾಮಿನಿ ಎಂಬ ಮಹಿಳೆ ಬಟ್ಟೆ ತೊಳೆಯಲು ಖರಸ್ರೋಟ ನದಿಯ ತೀರಕ್ಕೆ ಹೋಗಿದ್ದಾಗ ಆಕಸ್ಮಿಕವಾಗಿ ಮೊಸಳೆ ದಾಳಿ ನಡೆಸಿದೆ.

ಮಹಿಳೆ ನದಿಯ ಅಂಚಿನಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಹತ್ತಿರದಲ್ಲಿದ್ದ ಮೊಸಳೆ ನೇರವಾಗಿ ಬಂದು ಆಕೆಯನ್ನು ನದಿಯೊಳಗೆ ಎಳೆದೊಯ್ದಿದೆ (Crocodile drags woman into river) ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ ಆಕೆಯ ಹುಡುಕಾಟ ಮುಂದುವರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯ ಸಮಯದಲ್ಲಿ ಹತ್ತಿರದ ಸೇತುವೆಗೇರಿದ್ದ ಕೆಲವರು ಈ ದೃಶ್ಯವನ್ನು ಗಮನಿಸಿದ್ದು, ನೆರವಾಗಲು ಯತ್ನಿಸಿದರೂ ಮೊಸಳೆ ವೇಗದಿಂದ ಆಕೆಯನ್ನು ಆಳಕ್ಕೆ ಎಳೆದುಕೊಂಡು ಹೋಯಿತು. ಈ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಅದೇ ಕ್ಷಣದಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಸ್ಥಳೀಯರಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಗ್ರಾಮಸ್ಥರು ನದಿಯ ಸಮೀಪ ಹೋಗುವುದಕ್ಕೂ ಹೆದರುತ್ತಿದ್ದಾರೆ.

ಸ್ಥಳೀಯ ಆಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹುಡುಕಾಟ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಮೊಸಳೆ ಬೇಟೆಗಾರರು ಹಾಗೂ ಅರಣ್ಯ ಸಿಬ್ಬಂದಿ ನದಿಯ ತೀರದಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಈ ಘಟನೆಯಿಂದ ನದಿತೀರ ಪ್ರದೇಶದಲ್ಲಿ ನಿವಾಸಿಗಳು ಆತಂಕದಿಂದ ಕಂಗಾಲಾಗಿದ್ದು, ಸರ್ಕಾರದಿಂದ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ.

Crocodile Drags Woman into River in Odisha

Related Stories