ದಟ್ಟ ಮಂಜು ಎಫೆಕ್ಟ್: ಘನ ಘೋರ ಅಪಘಾತ! ಬೆಂಕಿ ಹೊತ್ತಿಕೊಂಡು ನಾಲ್ವರು ಸಾವು
ದಟ್ಟ ಮಂಜು ಆವರಿಸಿದ ವೇಳೆ ಮಥುರದ ದೆಹಲಿ–ಆಗ್ರಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬಸ್ಸುಗಳು ಹಾಗೂ ಕಾರುಗಳು ಸರಣಿ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡು ನಾಲ್ವರು ಮೃತಪಟ್ಟು ಇಪ್ಪತ್ತೈದು ಜನರು ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ
ಉತ್ತರ ಪ್ರದೇಶದ ಮಥುರ ಸಮೀಪದ ದೆಹಲಿ–ಆಗ್ರಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ (Delhi Agra Expressway) ಮಂಗಳವಾರ ಮುಂಜಾನೆ ಭೀಕರ ರಸ್ತೆ ಅಪಘಾತ (Road Crash) ಸಂಭವಿಸಿದೆ. ದಟ್ಟವಾದ ಮಂಜು (Thick Fog) ದೃಶ್ಯತೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿದ್ದು, ಒಂದರ ಹಿಂದೊಂದು ವಾಹನಗಳು ಡಿಕ್ಕಿ ಹೊಡೆದಿವೆ.
ಸರಣಿ ಡಿಕ್ಕಿ, ಹೊತ್ತಿಕೊಂಡ ಬೆಂಕಿ
ಸುಮಾರು ಬೆಳಗಿನ 2 ಗಂಟೆಯ ವೇಳೆಗೆ ಪ್ರಯಾಣಿಕರ ಬಸ್ಸುಗಳು ಹಾಗೂ ಹಲವು ಕಾರುಗಳು ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೀಡಾಗಿವೆ. ಡಿಕ್ಕಿಯ ತಕ್ಷಣವೇ ಕೆಲವು ಬಸ್ಸುಗಳಿಗೆ ಬೆಂಕಿ ಹೊತ್ತಿಕೊಂಡು, ಕ್ಷಣಗಳಲ್ಲಿ ಇತರ ವಾಹನಗಳಿಗೂ ವ್ಯಾಪಿಸಿದೆ. ಭಾರೀ ಜ್ವಾಲೆಗಳು ಆಕಾಶಕ್ಕೆ ಏರಿದ ದೃಶ್ಯಗಳು ಆತಂಕ ಸೃಷ್ಟಿಮಾಡಿದವು.
ಸ್ಥಳದಲ್ಲೇ ನಾಲ್ವರು ಜೀವ ಕಳೆದುಕೊಂಡರು
ಅಪಘಾತದ ತೀವ್ರತೆಯಿಂದ ನಾಲ್ವರು ಪ್ರಯಾಣಿಕರು ಸಜೀವದಹನಗೊಂಡು ಮೃತಪಟ್ಟಿದ್ದಾರೆ. ಕನಿಷ್ಠ 25 ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಕೆಲವರು ಸಮಯಕ್ಕೆ ಸರಿಯಾಗಿ ವಾಹನಗಳಿಂದ ಹೊರಬಂದು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ.
ಅಗ್ನಿಶಾಮಕ ದಳ ದೌಡು
ಮಾಹಿತಿ ದೊರಕುತ್ತಿದ್ದಂತೆ ಅಗ್ನಿಶಾಮಕ ದಳದ 11 ಫೈರ್ ಎಂಜಿನ್‌ಗಳು ಸ್ಥಳಕ್ಕೆ ಧಾವಿಸಿವೆ. ಗಂಟೆಗಳ ಪರಿಶ್ರಮದ ಬಳಿಕ ಹೊತ್ತಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಅಪಘಾತದಲ್ಲಿ ಏಳು ಬಸ್ಸುಗಳು ಹಾಗೂ ಕೆಲವು ಕಾರುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ.
ತನಿಖೆ ಆರಂಭ, ಸಂಚಾರ ಅಸ್ತವ್ಯಸ್ತ
ಭಾರೀ ಮಂಜೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸಂಚಾರ ಕೆಲಕಾಲ ಸಂಪೂರ್ಣ ಸ್ಥಗಿತಗೊಂಡಿತ್ತು.



