ಟಿವಿ ವಿಚಾರಕ್ಕೆ ಜಗಳ: ಮಗಳನ್ನೇ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಂದ ತಂದೆ
ಟಿವಿ ನೋಡುವ ವಿಚಾರಕ್ಕೆ ಮನೆಯಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ತಂದೆಯೊಬ್ಬರು ಕೋಪದ ಭರದಲ್ಲಿ 17 ವರ್ಷದ ಮಗಳ ತಲೆಗೆ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಹತ್ಯೆ ಮಾಡಿದ್ದಾರೆ.

- ಟಿವಿ ಜಗಳದ ಬಳಿಕ 17 ವರ್ಷದ ಮಗಳ ಹತ್ಯೆ
- ಕ್ರಿಕೆಟ್ ಬ್ಯಾಟ್ನಿಂದ ತಲೆಗೆ ಹೊಡೆದ ತಂದೆ
- ಮಹಾರಾಷ್ಟ್ರ ಸತಾರಾದಲ್ಲಿ ಘಟನೆ, ಆರೋಪಿ ಬಂಧನ
ಮಹಾರಾಷ್ಟ್ರದ (Maharashtra) ಸತಾರಾ ಜಿಲ್ಲೆಯಲ್ಲಿ ಟಿವಿ ನೋಡುವ ವಿಚಾರಕ್ಕೆ ನಡೆದ ಜಗಳ ದುರಂತ ಅಂತ್ಯ ಕಂಡಿದೆ. 17 ವರ್ಷದ ಮಗಳನ್ನು ತಂದೆಯೇ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಮೃತ ಬಾಲಕಿಯನ್ನು ಆರ್ಯಾ ಕದಮ್ (Arya Kadam) ಎಂದು ಗುರುತಿಸಲಾಗಿದೆ.
ಭಾನುವಾರ ಅಕ್ಟೋಬರ್ 4ರ ರಾತ್ರಿ ಆರ್ಯಾ ಕದಮ್ ಮನೆಯಲ್ಲಿ ಟಿವಿ ನೋಡುತ್ತಿದ್ದಳು. ಈ ವೇಳೆ ಆಕೆಯ ಕಿರಿಯ ಸಹೋದರ ಟಿವಿ ಬಂದ್ ಮಾಡಿದ್ದಾನೆ. ಇದರಿಂದ ಕೋಪಗೊಂಡ ಆರ್ಯಾ, ಸಹೋದರ ಹಾಗೂ ಸಹೋದರಿಯ ಮೇಲೆ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ.
ಈ ಘಟನೆ ಕಂಡ ತಂದೆ ಪುರುಷೋತ್ತಮ್ ಕದಮ್ (Purushottam Kadam) ಮಗಳನ್ನು ಗದರಿಸಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಆರ್ಯಾ, ತಂದೆಯ ಮೇಲೆಯೇ ಕ್ರಿಕೆಟ್ ಬ್ಯಾಟ್‌ನಿಂದ ದಾಳಿ ಮಾಡಲು ಮುಂದಾಗಿದ್ದಾಳೆ. ಈ ವೇಳೆ ತಂದೆ ಬ್ಯಾಟ್ ಕಸಿದುಕೊಂಡು ಮಗಳ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಭೀಕರ ಅಪಘಾತ: ರಸ್ತೆಬದಿ ನಿಂತಿದ್ದ ಟ್ರಕ್‌ಗೆ ಬೊಲೆರೋ ಡಿಕ್ಕಿ, 7 ಮಂದಿ ಸಾವು
ಹೊಡೆತದಿಂದ ತೀವ್ರ ರಕ್ತಸ್ರಾವವಾಗಿದ್ದು, ಆರ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಘಟನೆ ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ತಂದೆ-ತಾಯಿ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ರಕ್ತದ ಕಲೆ ಬಿದ್ದಿದ್ದ ಬಟ್ಟೆಗಳನ್ನು ಬದಲಿಸಿ ವಾಷಿಂಗ್ ಮೆಷಿನ್‌ನಲ್ಲಿ ತೊಳೆದಿದ್ದು, ಮನೆಯಲ್ಲಿದ್ದ ರಕ್ತದ ಗುರುತುಗಳನ್ನು ಕೂಡ ಸ್ವಚ್ಛಗೊಳಿಸಿದ್ದರು.
ಪೊಲೀಸರು ವಿಚಾರಿಸಿದಾಗ, ಆರಂಭದಲ್ಲಿ ಮಗಳು ಗೋಡೆಗೆ ತಲೆ ಡಿಕ್ಕಿ ಹೊಡೆದುಕೊಂಡು ಮೃತಪಟ್ಟಿದ್ದಾಳೆ ಎಂದು ಕುಟುಂಬದವರು ಹೇಳಿದ್ದರೆನ್ನಲಾಗಿದೆ. ಆದರೆ ನೆರೆಹೊರೆಯವರ ಮಾಹಿತಿ ಆಧರಿಸಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಪ್ರಕರಣದ ಬಗ್ಗೆ ಅನುಮಾನ ಮೂಡಿದೆ.
ಇದನ್ನೂ ಓದಿ: ಹೀನಾಯ ಕೃತ್ಯ; ಗಲಾಟೆ ಮಾಡಿದ 82 ಮಕ್ಕಳಿಗೆ ಅರ್ಧ ತಲೆ ಬೋಳಿಸಿ ಶಿಕ್ಷೆ
ನಂತರ ಪೊಲೀಸರು ನಡೆಸಿದ ತೀವ್ರ ವಿಚಾರಣೆಯಲ್ಲಿ ಆರ್ಯಾಳ ತಾಯಿ ಘಟನೆಗೆ ಸಂಬಂಧಿಸಿದ ಸತ್ಯವನ್ನು ಬಹಿರಂಗಪಡಿಸಿದ್ದಾಳೆ. ಬಳಿಕ ತಂದೆ ಪುರುಷೋತ್ತಮ್ ಕೂಡ ಮಗಳನ್ನು ಹೊಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪುರುಷೋತ್ತಮ್ ಕದಮ್ ಅವರನ್ನು ಬಂಧಿಸಿ ಕೊಲೆ ಪ್ರಕರಣ (Murder Case) ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಕುಟುಂಬದ ಇತರ ಸದಸ್ಯರ ಪಾತ್ರದ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



