ವೈರಲ್ ವಿಡಿಯೋ! ರೈಲಿನಡಿ ಬಿದ್ದ ಮಗು, ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ ತಂದೆ

ಬಾಂಗ್ಲಾದೇಶದ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನ ಮಧ್ಯೆ ಬಿದ್ದ ಮಗುವನ್ನು ತಂದೆ ಕ್ಷಣಾರ್ಧದಲ್ಲಿ ಜೀವ ಪಣಕ್ಕಿಟ್ಟು ರಕ್ಷಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ರೈಲು ಪ್ರಯಾಣವನ್ನು ಸಾಮಾನ್ಯ ಜನರು ಸುರಕ್ಷಿತ ಮತ್ತು ಕಡಿಮೆ ವೆಚ್ಚದ ಪ್ರಯಾಣ ಮಾರ್ಗವೆಂದು ಪರಿಗಣಿಸುತ್ತಾರೆ. ಆದರೆ ಕೆಲವೊಮ್ಮೆ ಸಣ್ಣ ನಿರ್ಲಕ್ಷ್ಯವೇ ದೊಡ್ಡ ಅಪಾಯಕ್ಕೆ ಕಾರಣವಾಗುತ್ತದೆ. ಇಂತಹ ಘಟನೆ ಇದೀಗ ಬಾಂಗ್ಲಾದೇಶದಲ್ಲಿ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಬಾಂಗ್ಲಾದೇಶದ ಕಿಶೋರೆಗಂಜ್ ಜಿಲ್ಲೆಯ ಭೈರಬ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಢಾಕಾ ಕಡೆಗೆ ತೆರಳುತ್ತಿದ್ದ ಟಿಟಾಸ್ ಕಮ್ಯೂಟರ್ ರೈಲು ತಡವಾಗಿ ನಿಲ್ದಾಣಕ್ಕೆ ಆಗಮಿಸಿತ್ತು. ಕುಟುಂಬದವರು ರೈಲಿನಿಂದ ಇಳಿಯಲು ಯತ್ನಿಸುತ್ತಿದ್ದ ವೇಳೆ ರೈಲು ಮತ್ತೆ ಚಲಿಸಲು ಆರಂಭಿಸಿತು.

ಈ ವೇಳೆ ತಂದೆ ತನ್ನ ಒಂದು ವರ್ಷದ ಮಗುವನ್ನು ಕೈಯಲ್ಲಿ ಹಿಡಿದು ಬೇಗ ಇಳಿಯಲು ಮುಂದಾದನು. ಆದರೆ ಆತುರದಲ್ಲಿ ಮಗು ಕೈಯಿಂದ ಜಾರಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಜಾಗಕ್ಕೆ ಬಿದ್ದಿತು. ಈ ದೃಶ್ಯ ಕಂಡ ತಂದೆ ಕ್ಷಣವೂ ಯೋಚಿಸದೆ ತಕ್ಷಣವೇ ಟ್ರ್ಯಾಕ್‌ಗೆ ಹಾರಿದ್ದಾನೆ.

ತಂದೆ ಮಗುವನ್ನು ಬಿಗಿಯಾಗಿ ಅಪ್ಪಿಕೊಂಡು ಪ್ಲಾಟ್‌ಫಾರ್ಮ್ ಅಂಚಿನ ಗೋಡೆಯ ಬಳಿ ಮಲಗಿಕೊಂಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ರೈಲು ಬೋಗಿಗಳು ಅವರ ಮೇಲಿಂದ ಸಾಗಿದರೂ ಅದೃಷ್ಟವಶಾತ್ ಇಬ್ಬರೂ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ರೈಲು ಸಂಪೂರ್ಣವಾಗಿ ತೆರಳಿದ ಬಳಿಕ ಜನರು ತಕ್ಷಣ ಸ್ಥಳಕ್ಕೆ ಧಾವಿಸಿ ತಂದೆ ಮತ್ತು ಮಗುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು. ಮಗುವಿನ ತಾಯಿ ಕೂಡ ಭಾವೋದ್ವಿಗ್ನಗೊಂಡು ಮಗುವನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ಈ ಘಟನೆ ಅಲ್ಲಿದ್ದ ಎಲ್ಲರ ಮನಸ್ಸನ್ನೇ ನಡುಗಿಸಿತು.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಮಗುವಿನ ಜೀವ ಉಳಿಸಿದ ತಂದೆಯ ಧೈರ್ಯವನ್ನು ಜನರು ಮೆಚ್ಚುತ್ತಿದ್ದಾರೆ. ಜೊತೆಗೆ ರೈಲು ಪ್ರಯಾಣದ ವೇಳೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕೆಂಬ ಸಂದೇಶವನ್ನೂ ಈ ಘಟನೆ ನೀಡಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories