ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಬದಲಾವಣೆ! ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ

ಗೃಹಲಕ್ಷ್ಮಿ ಯೋಜನೆಯ ಹಣ ದುರುಪಯೋಗ ತಡೆಯುವ ಉದ್ದೇಶದಿಂದ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದ್ದು, ಫಲಾನುಭವಿಗಳು ಶೀಘ್ರದಲ್ಲೇ ನೋಂದಣಿ ಮಾಡಿಸಬೇಕಾಗುವ ಸಾಧ್ಯತೆ ಇದೆ.

ಗೃಹಲಕ್ಷ್ಮಿ ಯೋಜನೆಯಡಿ ನೀಡಲಾಗುತ್ತಿರುವ ಮಾಸಿಕ ₹2,000 ಸಹಾಯಧನ ಸರಿಯಾದ ಫಲಾನುಭವಿಗಳ ಕೈ ಸೇರಲು ಸರ್ಕಾರ ಹೊಸ ಕ್ರಮಕ್ಕೆ ಮುಂದಾಗಿದೆ. ಯೋಜನೆಯ ದುರುಪಯೋಗ ತಡೆಯುವ ಉದ್ದೇಶದಿಂದ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ.

ಮಾಹಿತಿಯ ಪ್ರಕಾರ, ಮುಂದಿನ ತಿಂಗಳಿಂದ ಈ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ. ಒಮ್ಮೆ ಬಯೋಮೆಟ್ರಿಕ್ ನೀಡಿದ ಬಳಿಕ ಫಲಾನುಭವಿಯ ಗುರುತು ಖಚಿತಪಡಿಸಿಕೊಂಡು ಹಣ ಬಿಡುಗಡೆ ಮಾಡುವ ವ್ಯವಸ್ಥೆ ರೂಪಿಸಲಾಗುತ್ತಿದೆ.

ಬಯೋಮೆಟ್ರಿಕ್ ನೋಂದಣಿಗೆ ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಸೇವಾಸಿಂಧು ಕೇಂದ್ರಗಳಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ನೋಂದಣಿಗೆ ಫಲಾನುಭವಿಗಳು ಆಧಾರ್ ಕಾರ್ಡ್ ಕಡ್ಡಾಯವಾಗಿ ಕೊಂಡೊಯ್ಯಬೇಕಾಗುತ್ತದೆ.

ಬಯೋಮೆಟ್ರಿಕ್ ಪ್ರಕ್ರಿಯೆಗೆ ಸುಮಾರು ₹5 ಶುಲ್ಕ ನಿಗದಿಪಡಿಸುವ ಕುರಿತು ಚರ್ಚೆ ನಡೆಯುತ್ತಿದೆ. ಇದರಿಂದ ಯೋಜನೆಯ ಹಣ ಅರ್ಹ ಮಹಿಳೆಯರ ಖಾತೆಗೆ ಮಾತ್ರ ತಲುಪುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಇದರ ಜೊತೆಗೆ ಗೃಹಲಕ್ಷ್ಮಿ ಸೊಸೈಟಿಗೆ ಸದಸ್ಯತ್ವ ಪಡೆಯುವ ಆಯ್ಕೆಯನ್ನೂ ನೀಡಲಾಗುತ್ತಿದೆ. ಆದರೆ ಸದಸ್ಯತ್ವ ಕಡ್ಡಾಯವಲ್ಲ. ಸದಸ್ಯತ್ವ ಬೇಡವೆಂದರೆ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸಿದರೆ ಸಾಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಈ ಸಂಬಂಧ ವಿಶೇಷ ಆ್ಯಪ್ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದ್ದು, ಅಧಿಕೃತ ಆದೇಶ ಹೊರಬಿದ್ದ ಬಳಿಕ ಸಂಪೂರ್ಣ ಮಾರ್ಗಸೂಚಿ ಪ್ರಕಟವಾಗುವ ನಿರೀಕ್ಷೆಯಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories