ಭಾರೀ ಮಳೆ, ಮನೆಯ ಗೋಡೆ ಕುಸಿದು ಎಂಟು ವರ್ಷದ ಬಾಲಕಿ ಸಾವು

ಯಾದಗಿರಿ ಜಿಲ್ಲೆಯ ತುಮಕೂರು ಗ್ರಾಮದಲ್ಲಿ ಭಾರೀ ಮಳೆಯಿಂದ ಮನೆಯ ಗೋಡೆ ಕುಸಿದು ಎಂಟು ವರ್ಷದ ಬಾಲಕಿ ಮೃತಪಟ್ಟಿದ್ದು, ಇನ್ನಿಬ್ಬರು ಮಕ್ಕಳು ಗಾಯಗೊಂಡ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

  • ಭಾರೀ ಮಳೆಗೆ ಅಡುಗೆ ಮನೆಯ ಗೋಡೆ ಕುಸಿತ
  • ಆಟವಾಡುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವು
  • ಇಬ್ಬರು ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು

ಯಾದಗಿರಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಇದೀಗ ಒಂದು ಕುಟುಂಬದ ಬದುಕಿನಲ್ಲಿ ದುರಂತ ತಂದಿದೆ. ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಎಂಟು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಮನಕಲಕುವಂತಿದೆ.

ಸೋಮವಾರ ಸುರಿದ ಮಳೆಯಿಂದ ಸಿದ್ದಪ್ಪ ಎಂಬವರ ಮನೆಯ ಅಡುಗೆ ಕೋಣೆಯ ಗೋಡೆ ಏಕಾಏಕಿ ಕುಸಿದಿದೆ. ಆ ಸಮಯದಲ್ಲಿ ಮನೆಯ ಅಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಗೋಡೆ ಕುಸಿದು ಬಿದ್ದ ಪರಿಣಾಮ ಅಕ್ಷತಾ (8) ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನೆಯಲ್ಲಿ ಇನ್ನಿಬ್ಬರು ಮಕ್ಕಳು ಗಾಯಗೊಂಡಿದ್ದು, ಅವರನ್ನು ತಕ್ಷಣ ಯಾದಗಿರಿ ಯೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಸ್ಥಿತಿ ಕುರಿತು ವೈದ್ಯರು ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಪಂ ಸಿಇಒ ಲವೀಶ್ ಒರಡಿಯಾ ಹಾಗೂ ಎಸ್ಪಿ ಪೃಥ್ವಿಕ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅಧಿಕಾರಿಗಳು ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.

ಭಾರೀ ಮಳೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹಳೆಯ ಮನೆಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಪ್ರಕರಣ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories