ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಕಲ್ಲಿನಿಂದ ಜಜ್ಜಿ ಪತ್ನಿ ಕೊಂದ ಪತಿ
ಕಬ್ಬು ಕಟಾವು ಗ್ಯಾಂಗ್‌ನಲ್ಲಿ ಕೆಲಸ ಮಾಡಲು ಗ್ರಾಮಕ್ಕೆ ಬಂದಿದ್ದರು, ಮದ್ಯದ ನಶೆಯಲ್ಲಿ ಬಾಲಾಜಿ ಪತ್ನಿಯನ್ನು ಕೊಲೆಗೈದಿದ್ದಾನೆ.
- ಮದ್ಯದ ನಶೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಲೆ
- ಕೊಲೆಯ ನಂತರ ಸಂಬಂಧಿಕರಿಗೆ ವಿಡಿಯೋ ಕಾಲ್ ಮಾಡಿದ ಪತಿ
- ತಾಯಿಯ ಮೃತದೇಹದ ಮೇಲೆ ಮಗು ಮಲಗಿ ಎಬ್ಬಿಸಲು ಯತ್ನ
ಬೆಳಗಾವಿ (Belagavi) : ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಭೀಕರ ಘಟನೆ ನಡೆದಿದೆ. ಬಾಲಾಜಿ ಕಬಲಿ (35) ಎಂಬ ವ್ಯಕ್ತಿ, ಮದ್ಯದ ನಶೆಯಲ್ಲಿ ತನ್ನ ಪತ್ನಿ ಮೀರಾಬಾಯಿ (25) ಅವರನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ. ಈ ದುರ್ಘಟನೆ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ.
ಮಹಾರಾಷ್ಟ್ರ ಮೂಲದ ಈ ದಂಪತಿ ಕಬ್ಬು ಕಟಾವು ಗ್ಯಾಂಗ್‌ನಲ್ಲಿ ಕೆಲಸ ಮಾಡಲು ಗ್ರಾಮಕ್ಕೆ ಬಂದಿದ್ದರು. ಆದರೆ, ಕುಟುಂಬದ ಅಂತರಿಕ ಕಲಹದ ನಡುವೆ ತೀವ್ರ ವಾಗ್ವಾದವಾಗಿ, ಮದ್ಯದ ನಶೆಯಲ್ಲಿ ಬಾಲಾಜಿ ಪತ್ನಿಯನ್ನು ಕೊಲೆಗೈದಿದ್ದಾನೆ.
ಬಳ್ಳಾರಿ: ಮತ್ತೋರ್ವ ಬಾಣಂತಿ ಸಾವು, ವೈದ್ಯರ ನಿರ್ಲಕ್ಷ್ಯದ ಆರೋಪ
ಪತ್ನಿಯನ್ನು ಕೊಂದ ಬಳಿಕ, ಆರೋಪಿ ತನ್ನ ಸಂಬಂಧಿಕರಿಗೆ ವಿಡಿಯೋ ಕಾಲ್ ಮಾಡಿ ಘಟನೆ ವಿವರಿಸಿದ್ದಾನೆ. ಈ ದೃಶ್ಯ ಮನಕಲಕುವಂತಿತ್ತು. ಅದರಲ್ಲೂ, ತಾಯಿಯ ಮೃತದೇಹದ ಮೇಲೆ ಮಲಗಿ ಮಗುವು ಆಕೆಯನ್ನು ಎಬ್ಬಿಸಲು ಯತ್ನಿಸುತ್ತಿರುವುದು ಜನರ ಮನಸು ಮುರಿದಂತಾಗಿತ್ತು.
ಸ್ಥಳೀಯರು ಕೋಪಗೊಂಡು ಆರೋಪಿಗೆ ಹಿಡಿಶಾಪ ಹಾಕಿದ್ದು, ಕೂಡಲೇ ಈ ಬಗ್ಗೆ ಮಾಹಿತಿ ಪಡೆದ ಗೋಕಾಕ್ ಗ್ರಾಮೀಣ ಠಾಣೆಯ ಪೊಲೀಸರು ಬಾಲಾಜಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
Husband Kills Wife in Drunken Rage in Belagavi