ರೇಷನ್ ಕಾರ್ಡ್‌ದಾರರಿಗೆ ಬಿಗ್ ಅಲರ್ಟ್: ಕೂಡಲೇ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ!
ಮೇರಾ ರೇಷನ್ ಆ್ಯಪ್ ಮೂಲಕ ಮನೆಯಲ್ಲೇ ಮಾಡುತ್ತಿರುವ e-KYC ಕರ್ನಾಟಕದಲ್ಲಿ ಅಧಿಕೃತವಾಗಿ ಮಾನ್ಯವಲ್ಲ ಎಂದು ಆಹಾರ ಇಲಾಖೆ ತಿಳಿಸಿದ್ದು, ಫಲಾನುಭವಿಗಳು ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಮೂಲಕವೇ e-KYC ಪೂರ್ಣಗೊಳಿಸಬೇಕು.

ಬೆಂಗಳೂರು (Bengaluru): ರೇಷನ್ ಕಾರ್ಡ್ (Ration Card) ಫಲಾನುಭವಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದ ಮೇರಾ ರೇಷನ್ (Mera Ration) ಅಥವಾ Mera eKYC ಮೊಬೈಲ್ ಆ್ಯಪ್ ಮೂಲಕ ಮನೆಯಿಂದಲೇ ಮಾಡುತ್ತಿರುವ e-KYC ಕರ್ನಾಟಕದಲ್ಲಿ ಅಧಿಕೃತವಾಗಿ ಮಾನ್ಯವಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಹಾಗೂ ಮಾಹಿತಿಯನ್ನು ನಂಬಿ ಹಲವರು ಮೊಬೈಲ್‌ನಲ್ಲೇ ಮುಖ ಗುರುತಿಸುವಿಕೆ (Face Authentication) ಮೂಲಕ e-KYC ಮಾಡಿಕೊಳ್ಳುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಉಂಟಾಗುವ ಜನದಟ್ಟಣೆ ಹಾಗೂ ಸರ್ವರ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಈ ವಿಧಾನವನ್ನು ಅನುಸರಿಸಲಾಗುತ್ತಿದೆ.
ಆದರೆ, ಮೇರಾ ರೇಷನ್ ಆ್ಯಪ್ ಕೇಂದ್ರ ಸರ್ಕಾರದ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆಗೆ (One Nation One Ration Card) ಸಂಬಂಧಿಸಿದ ಆ್ಯಪ್ ಆಗಿದೆ. ಕರ್ನಾಟಕ ಆಹಾರ ಇಲಾಖೆಯ ಪಡಿತರ ತಂತ್ರಾಂಶ ಮತ್ತು ಈ ಆ್ಯಪ್‌ನ ಸರ್ವರ್‌ಗಳ ನಡುವೆ ಅಗತ್ಯ ಡೇಟಾ ಲಿಂಕ್ ಇಲ್ಲ. ಹೀಗಾಗಿ ಆ್ಯಪ್‌ನಲ್ಲಿ e-KYC ಪೂರ್ಣಗೊಳಿಸಿದರೂ ಕರ್ನಾಟಕದ ಆಹಾರ ಇಲಾಖೆಯ ದಾಖಲೆಗಳಲ್ಲಿ ಅದು ನವೀಕರಣವಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಆಹಾರ ಇಲಾಖೆಯ ಉಪ ನಿರ್ದೇಶಕ ಕೆ.ಪಿ. ಮಧುಸೂದನ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ತಪ್ಪು ಮಾಹಿತಿಯನ್ನು ನಂಬಿ ಸಾರ್ವಜನಿಕರು ಗೊಂದಲಕ್ಕೀಡಾಗಬಾರದು ಎಂದು ತಿಳಿಸಿದ್ದಾರೆ.
ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಪ್ರತಿಯೊಬ್ಬ ಸದಸ್ಯರೂ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ (Fair Price Shop) ತೆರಳಿ ಇ-ಪೋಸ್ ಯಂತ್ರದ ಮೂಲಕ ಬಯೋಮೆಟ್ರಿಕ್ ನೀಡಿ e-KYC ಪೂರ್ಣಗೊಳಿಸಬೇಕು ಎಂದು ಇಲಾಖೆ ಸೂಚಿಸಿದೆ.
ಇದೇ ವೇಳೆ, ನ್ಯಾಯಬೆಲೆ ಅಂಗಡಿಗಳಲ್ಲಿ ಜನದಟ್ಟಣೆ ಮತ್ತು ಸರ್ವರ್ ಸಮಸ್ಯೆ ಕಡಿಮೆ ಮಾಡಲು ಆಹಾರ ಇಲಾಖೆ ಪ್ರತ್ಯೇಕ ಅಧಿಕೃತ ಆಂಡ್ರಾಯ್ಡ್ ಆ್ಯಪ್ ಅಭಿವೃದ್ಧಿಪಡಿಸುತ್ತಿದೆ. ಈ ಆ್ಯಪ್ ಅಧಿಕೃತವಾಗಿ ಬಿಡುಗಡೆಯಾಗುವವರೆಗೆ ಯಾವುದೇ ಮೂರನೇ ವ್ಯಕ್ತಿಯ ಆ್ಯಪ್ ಅಥವಾ ಅನಧಿಕೃತ ವಿಧಾನ ಬಳಸಿ e-KYC ಮಾಡಿಕೊಳ್ಳದಂತೆ ಫಲಾನುಭವಿಗಳಿಗೆ ಸೂಚಿಸಲಾಗಿದೆ.
ರಾಜ್ಯಾದ್ಯಂತ ಎದುರಾದ ಸರ್ವರ್ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು e-KYC ಪೂರ್ಣಗೊಳಿಸುವ ಕೊನೆಯ ದಿನಾಂಕವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಬಾಕಿ ಉಳಿದಿರುವ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.
ನಿಮ್ಮ ರೇಷನ್ ಕಾರ್ಡ್ e-KYC ಪೂರ್ಣಗೊಂಡಿದೆಯೇ ಎಂಬುದನ್ನು ಪರಿಶೀಲಿಸಲು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ‘ಇ-ಸೇವೆಗಳು’ ವಿಭಾಗದಲ್ಲಿರುವ ‘e-Status’ ಆಯ್ಕೆಯನ್ನು ಬಳಸಬಹುದು. ಅಲ್ಲಿ Done/Completed ಎಂದು ತೋರಿಸಿದರೆ ಮಾತ್ರ e-KYC ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಪರಿಗಣಿಸಬಹುದು.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



