ಪಿಂಚಣಿ ಫಲಾನುಭವಿಗಳ ಪರಿಶೀಲನೆ: 16.42 ಲಕ್ಷ ಖಾತೆಗಳ ಪಾವತಿ ತಾತ್ಕಾಲಿಕ ಸ್ಥಗಿತ

ಅರ್ಹತೆ ಪರಿಶೀಲನೆಗಾಗಿ ರಾಜ್ಯ ಸರ್ಕಾರ ಸಂಯೋಜನೆ ಆ್ಯಪ್ ಮೂಲಕ ಪಿಂಚಣಿ ಖಾತೆಗಳ ತಪಾಸಣೆ ಆರಂಭಿಸಿದ್ದು, ದಾಖಲೆಗಳ ಕೊರತೆಯಿರುವ 16.42 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಪಾವತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಬೆಂಗಳೂರು, ಜೂನ್ 26: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಪರಿಶೀಲನೆಯ ಬಳಿಕ ಇದೀಗ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನೆಗೆ ಚಾಲನೆ ನೀಡಿದೆ. ಅರ್ಹರಿಗೆ ಮಾತ್ರ ಪಿಂಚಣಿ ಸೌಲಭ್ಯ ತಲುಪುವ ಉದ್ದೇಶದಿಂದ ‘ಸಂಯೋಜನೆ ಆ್ಯಪ್’ ಮೂಲಕ ಸಂದೇಹಾಸ್ಪದ ಖಾತೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಪ್ರಾಥಮಿಕ ಪರಿಶೀಲನೆಯಲ್ಲಿ ರಾಜ್ಯದ ಒಟ್ಟು 83,11,493 ಪಿಂಚಣಿ ಫಲಾನುಭವಿಗಳ ಪೈಕಿ 23,13,664 ಖಾತೆಗಳ ಮಾಹಿತಿ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಪೈಕಿ ಗ್ರಾಮ ಆಡಳಿತಾಧಿಕಾರಿಗಳ ಪರಿಶೀಲನೆಯ ಬಳಿಕ 3,35,610 ಮಂದಿ ಅರ್ಹರು ಎಂಬುದು ದೃಢಪಟ್ಟಿದ್ದು, ಉಳಿದ ಪ್ರಕರಣಗಳ ಪರಿಶೀಲನೆ ಮುಂದುವರಿದಿದೆ.

ಪರಿಶೀಲನೆ ವೇಳೆ ಅಗತ್ಯ ದಾಖಲೆ ಸಲ್ಲಿಸದವರು, ನೀಡಿರುವ ವಿಳಾಸದಲ್ಲಿ ವಾಸವಿಲ್ಲದವರು, ಆದಾಯ ಪ್ರಮಾಣಪತ್ರ ಅಥವಾ ವಯಸ್ಸಿನ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದವರು ಸೇರಿದಂತೆ 16,42,303 ಫಲಾನುಭವಿಗಳ ಪಿಂಚಣಿ ಪಾವತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಕ್ರಮವನ್ನು ಅಂತಿಮ ರದ್ದತಿ ಎಂದು ಪರಿಗಣಿಸಬಾರದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಂಬಂಧಪಟ್ಟ ಫಲಾನುಭವಿಗಳಿಗೆ ತಹಶೀಲ್ದಾರ್ ಕಚೇರಿ ಮೂಲಕ ನೋಟಿಸ್ ನೀಡಲಾಗುತ್ತದೆ. ನೋಟಿಸ್ ಪಡೆದವರು 30 ದಿನಗಳೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಪರಿಶೀಲನೆ ನಡೆಸಿ ಅರ್ಹತೆ ದೃಢಪಟ್ಟ ನಂತರ ಪಿಂಚಣಿ ಸೌಲಭ್ಯ ಮರು ಆರಂಭವಾಗಲಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಮೇ ತಿಂಗಳಲ್ಲಿ 63,04,554 ಫಲಾನುಭವಿಗಳಿಗೆ ಪಿಂಚಣಿ ಪಾವತಿಸಲಾಗಿತ್ತು. ಆದರೆ ಪರಿಶೀಲನೆ ವೇಳೆ ತಪ್ಪು ಮಾಹಿತಿ, ನಕಲಿ ದಾಖಲೆ ಅಥವಾ ಅನರ್ಹತೆ ಕಂಡುಬಂದ ಪ್ರಕರಣಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದ್ದು, ಪಿಂಚಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಅರ್ಹತೆಯನ್ನು ಖಚಿತಪಡಿಸುವ ಉದ್ದೇಶದಿಂದ ಈ ಅಭಿಯಾನ ಮುಂದುವರಿಯಲಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories