ಪ್ರೇಯಸಿಯ ಎದುರೇ ನಾಡಬಾಂಬ್ ಸ್ಫೋಟಿಸಿಕೊಂಡ ಪ್ರಿಯಕರ, ಕಾರಿನಲ್ಲೇ ಅಂತ್ಯ
ತುಮಕೂರು ಜಿಲ್ಲೆಯ ಶಿರಾ ಸಮೀಪ ಪ್ರೇಯಸಿಯನ್ನು ಅಪಹರಿಸಿ ಕರೆದೊಯ್ಯುತ್ತಿದ್ದ ಯುವಕ ಕಾರಿನೊಳಗೆ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವತಿ ಮತ್ತು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದ ಭೀಕರ ಘಟನೆ ಆತಂಕ ಸೃಷ್ಟಿಸಿದೆ. ಪ್ರೇಯಸಿಯನ್ನು ಅಪಹರಿಸಿ ಕರೆದುಕೊಂಡು ಹೋಗುತ್ತಿದ್ದ ಯುವಕ, ಕಾರಿನೊಳಗೆ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯಲ್ಲಿ ಯುವತಿ ಹಾಗೂ ಕಾರು ಚಾಲಕ ಅದೃಷ್ಟವಶಾತ್ ಜೀವ ಉಳಿಸಿಕೊಂಡಿದ್ದಾರೆ.
ಮೃತನನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಮೂಲದ 30 ವರ್ಷದ ನಾಗೇಂದ್ರ ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರಿನ ಸಮೀಪ ಮತ್ತೊಂದು ಜೀವಂತ ನಾಡಬಾಂಬ್ ಪತ್ತೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಗೇಂದ್ರ ಮತ್ತು ರಮ್ಯಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಮದುವೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾದ ಬಳಿಕ ರಮ್ಯಾ ವಿವಾಹಕ್ಕೆ ನಿರಾಕರಿಸಿದ್ದಳು. ಇದರಿಂದ ಅಸಮಾಧಾನಗೊಂಡ ನಾಗೇಂದ್ರ ಪೂರ್ವಯೋಜನೆಯಂತೆ ಬಾಡಿಗೆ ಕಾರು ಬುಕ್ ಮಾಡಿ, ರಮ್ಯಾ ವಾಸಿಸುತ್ತಿದ್ದ ಪಿಜಿ ಬಳಿ ತೆರಳಿ ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾನೆ ಎನ್ನಲಾಗಿದೆ.
ಪ್ರಯಾಣದ ವೇಳೆ ಕಾರಿನೊಳಗೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೋಪಗೊಂಡ ನಾಗೇಂದ್ರ ಆಯುಧದಿಂದ ಯುವತಿಗೆ ಹಲ್ಲೆ ನಡೆಸಿದಾಗ, ಆಕೆ ಚಲಿಸುತ್ತಿದ್ದ ಕಾರಿನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾಳೆ. ಇದನ್ನು ಗಮನಿಸಿದ ಕಾರು ಚಾಲಕ ತಕ್ಷಣವೇ ವಾಹನ ನಿಲ್ಲಿಸಿ ಯುವತಿಯ ರಕ್ಷಣೆಗೆ ಮುಂದಾಗಿದ್ದಾನೆ.
ಯುವತಿ ಸುರಕ್ಷಿತವಾಗಿ ಕಾರಿನಿಂದ ಹೊರಬಂದ ಬಳಿಕ ನಾಗೇಂದ್ರ ಕಾರಿನ ಬಾಗಿಲುಗಳನ್ನು ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾನೆ. ಬಳಿಕ ತನ್ನೊಂದಿಗೆ ತಂದಿದ್ದ ನಾಡಬಾಂಬ್ಗೆ ಬೆಂಕಿ ಹಚ್ಚಿ ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ಪರಿಣಾಮ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ನಾಗೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ಕುರಿತು ಮಾತನಾಡಿದ ಕಾರು ಚಾಲಕ ಪ್ರವೀಣ್, ಜಯನಗರದಿಂದ ಬುಕ್ ಆಗಿದ್ದ ಪ್ರಯಾಣ ಆರಂಭದಲ್ಲಿ ಯಾವುದೇ ಅನುಮಾನ ಮೂಡಿರಲಿಲ್ಲ ಎಂದು ತಿಳಿಸಿದ್ದಾರೆ. ಮಧ್ಯದಲ್ಲೇ ಅಂಕೋಲದಿಂದ ಕರೆ ಬಂದ ನಂತರ ಇದು ಅಪಹರಣ ಪ್ರಕರಣ ಎಂಬ ಮಾಹಿತಿ ತಿಳಿದುಬಂದಿತ್ತಂತೆ. ನಂತರ ಕಾರಿನೊಳಗೆ ಜಗಳ ಆರಂಭವಾಗಿ, ಯುವತಿಗೆ ಹಲ್ಲೆ ನಡೆದಿದ್ದು, ಆಕೆಯನ್ನು ರಕ್ಷಿಸುವುದೇ ಮೊದಲ ಆದ್ಯತೆಯಾಯಿತು ಎಂದು ಅವರು ಹೇಳಿದ್ದಾರೆ.
ಪ್ರವೀಣ್ ಅವರ ಪ್ರಕಾರ, ಯುವತಿ ಕಾರಿನಲ್ಲಿ ಬಾಂಬ್ ಇರುವ ಬಗ್ಗೆ ಎಚ್ಚರಿಕೆ ನೀಡಿದ್ದಳು. ತಾನು ಕಾರಿನ ಬಳಿ ಹೋದಾಗ ನಾಗೇಂದ್ರನ ಕೈಯಲ್ಲಿ ಒಂದು ಬಾಂಬ್ ಇದ್ದುದನ್ನು ಕಂಡು ಅದನ್ನು ಕಿತ್ತು ದೂರ ಎಸೆದಿದ್ದೆ. ಆದರೆ ಮತ್ತೊಂದು ಬಾಂಬ್ಗೆ ಬೆಂಕಿ ಹಚ್ಚಲು ಆತ ಮುಂದಾದಾಗ ಅಲ್ಲಿಂದ ಓಡಿ ಬಂದೆ. ಕೆಲವೇ ಕ್ಷಣಗಳಲ್ಲಿ ಭಾರೀ ಸ್ಫೋಟ ಸಂಭವಿಸಿತು ಎಂದು ವಿವರಿಸಿದ್ದಾರೆ.
ಪ್ರಕರಣದ ಕುರಿತು ಸಿದ್ದಾಪುರ ಹಾಗೂ ಕಳ್ಳಂಬೆಳ್ಳ ಪೊಲೀಸರು ಜಂಟಿಯಾಗಿ ತನಿಖೆ ಮುಂದುವರಿಸಿದ್ದು, ಬೆಂಗಳೂರಿನಿಂದ ವಿಶೇಷ ತನಿಖಾ ತಂಡವೂ ಆಗಮಿಸುತ್ತಿದೆ. ಪ್ರೇಮ ವೈಫಲ್ಯ, ಅಪಹರಣ ಮತ್ತು ಸ್ಫೋಟಕ ಬಳಕೆಯ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



