3 ತಿಂಗಳ ಹಸುಗೂಸು ಸಾವು; ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಪೋಷಕರ ಆಕ್ರೋಶ
ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮೂರು ತಿಂಗಳ ಮಗು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ದುರಂತ ಸಂಭವಿಸಿದೆ ಎಂದು ಪೋಷಕರು ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.

ಚಿಕ್ಕಮಗಳೂರು, ಜೂನ್ 27: ಚಿಕ್ಕಮಗಳೂರಿನ ಸರ್ಕಾರಿ ಜಿಲ್ಲಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮೂರು ತಿಂಗಳ ಹಸುಗೂಸು ಮೃತಪಟ್ಟಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ ಎಂದು ಆರೋಪಿಸಿರುವ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಮೃತ ಮಗು ನಗರದ ಅರವಿಂದನಗರ ನಿವಾಸಿಗಳಾದ ರವೀಶ್ ಮತ್ತು ತೇಜಸ್ವಿನಿ ದಂಪತಿಯದ್ದಾಗಿದೆ. ಮಗುವಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ಮಗುವಿನ ರಕ್ತದ ಪ್ರಮಾಣ ಕಡಿಮೆಯಿದೆ ಎಂದು ತಿಳಿಸಿ, ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯುವಂತೆ ಸೂಚಿಸಿದ್ದರೆಂದು ಕುಟುಂಬದವರು ತಿಳಿಸಿದ್ದಾರೆ.
ಆದರೆ ಶುಕ್ರವಾರ ಬೆಳಗ್ಗೆ ಮಗುವಿನ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದರಿಂದ ಪೋಷಕರು ನಿರಾಳರಾಗಿದ್ದರು ಎನ್ನಲಾಗಿದೆ. ಬಳಿಕ ಕೆಲವೇ ಗಂಟೆಗಳಲ್ಲಿ ಮಗುವಿನ ಆರೋಗ್ಯ ಏಕಾಏಕಿ ಹದಗೆಟ್ಟಾಗ, ಇಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಎಂದು ಹೇಳಿ ತಕ್ಷಣ ಹಾಸನಕ್ಕೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ವೈದ್ಯರ ಸಲಹೆಯಂತೆ ಮಗುವನ್ನು ಹಾಸನಕ್ಕೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಬೇಲೂರು ಸಮೀಪ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಈ ಘಟನೆ ಕುಟುಂಬಸ್ಥರನ್ನು ತೀವ್ರ ಆಘಾತಕ್ಕೊಳಪಡಿಸಿದ್ದು, ಮಗುವಿನ ಮೃತದೇಹದೊಂದಿಗೆ ಆಸ್ಪತ್ರೆ ಆವರಣಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.
“ಬೆಳಿಗ್ಗೆ ಮಗು ಆರೋಗ್ಯವಾಗಿದೆಯೆಂದು ಹೇಳಿ, ಕೊನೆಯ ಕ್ಷಣದಲ್ಲಿ ಕೈಚೆಲ್ಲಿದರು. ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದರೆ ನಮ್ಮ ಮಗು ಬದುಕುತ್ತಿತ್ತು” ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಘಟನೆಯ ಬಳಿಕ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುವ ನಿರೀಕ್ಷೆಯಿದೆ.



