ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ! ಚಿಕ್ಕಬಳ್ಳಾಪುರದಲ್ಲಿ ಹೈಡ್ರಾಮಾ
ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಶಾಸಕ ಪ್ರದೀಪ್ ಈಶ್ವರ್ ಮೆರವಣಿಗೆ ವೇಳೆ ಚಪ್ಪಲಿ ಎಸೆದ ಘಟನೆ ನಡೆದಿದೆ. ಘೋಷಣೆಗಳು ಮತ್ತು ಪ್ರತಿಘೋಷಣೆಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರ ಮೆರವಣಿಗೆ ವೇಳೆ ಚಪ್ಪಲಿ ಎಸೆದ ಘಟನೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಕಾರಿನ ಸನ್‌ರೂಫ್ ಮೂಲಕ ಕಾರ್ಯಕರ್ತರಿಗೆ ಕೈ ಬೀಸುತ್ತ ಸಾಗುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಚಪ್ಪಲಿ ಎಸೆದಿದ್ದು, ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಆತನನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆಗೆ ಮುನ್ನ ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ನಡೆದ ಕೆಂಪೇಗೌಡ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಕಾರ್ಯಕ್ರಮದ ವೇಳೆ ಕೆಲ ಜೆಡಿಎಸ್ ಕಾರ್ಯಕರ್ತರು ವೇದಿಕೆಗೆ ನುಗ್ಗಿ ಶಾಸಕ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯಿಂದ ಕೆಳಗಿಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಪರಿಸ್ಥಿತಿ ಕೈಮೀರದಂತೆ ಸ್ವಾಮೀಜಿ ಮಧ್ಯಪ್ರವೇಶ ಮಾಡಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದ ಬಳಿಕ ಕಾರ್ಯಕ್ರಮ ಮುಂದುವರಿಯಿತು. ಆದರೆ ಕಾರ್ಯಕ್ರಮದ ಬಳಿಕವೂ ರಾಜಕೀಯ ಉದ್ವಿಗ್ನತೆ ಶಮನವಾಗಲಿಲ್ಲ.
ನಂತರ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರದೀಪ್ ಈಶ್ವರ್, ತಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರತ್ತ ಮೀಸೆ ತಿರುಗಿಸಿ, ತೋಳು ತಟ್ಟಿ ಪ್ರತಿಕ್ರಿಯೆ ನೀಡಿದರು. ಇದರಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿ, ಕೆಲವೇ ಕ್ಷಣಗಳಲ್ಲಿ ಅವರತ್ತ ಚಪ್ಪಲಿ ಎಸೆಯಲಾಯಿತು.
ಚಪ್ಪಲಿ ಎಸೆತ ನಡೆದ ತಕ್ಷಣ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಎಚ್ಚೆತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಘಟನೆಗೆ ಸಂಬಂಧಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆಯ ಬಳಿಕ ಮೆರವಣಿಗೆ ಮಾರ್ಗದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಯಿತು.
ಈ ಪ್ರಕರಣದ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.



