ಹಲಸಿನ ಹಣ್ಣು ಕೀಳಲು ಹೋಗಿ ವಿದ್ಯಾರ್ಥಿ ಸಾವು! ಬೆಂಗಳೂರು ಜಿಕೆವಿಕೆ ಆವರಣದಲ್ಲಿ ಘಟನೆ
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಹಲಸಿನ ಹಣ್ಣು ಕೀಳಲು ಮರ ಏರಿದ್ದ ಎಂಎಸ್ಸಿ ಕೃಷಿ ವಿದ್ಯಾರ್ಥಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ದುಃಖದ ವಾತಾವರಣ ಸೃಷ್ಟಿಸಿದೆ.

ಬೆಂಗಳೂರು (Bengaluru): ಕ್ಷಣಿಕ ಆಸೆ ಒಂದು ಪ್ರತಿಭಾವಂತ ವಿದ್ಯಾರ್ಥಿಯ ಜೀವವನ್ನೇ ಕಸಿದುಕೊಂಡ ಘಟನೆ ಬೆಂಗಳೂರಿನ ಯಲಹಂಕದ ಜಿಕೆವಿಕೆ ಆವರಣದಲ್ಲಿ ನಡೆದಿದೆ. ಹಲಸಿನ ಹಣ್ಣು ಕೀಳಲು ಮರ ಏರಿದ್ದ ವಿದ್ಯಾರ್ಥಿಯೊಬ್ಬ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮೃತ ವಿದ್ಯಾರ್ಥಿಯನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಮೂಲದ 23 ವರ್ಷದ ಆಕಾಶ್ ಎಂದು ಗುರುತಿಸಲಾಗಿದೆ. ಅವರು ಜಿಕೆವಿಕೆಯಲ್ಲಿ ಸರ್ಕಾರಿ ಸೀಟಿನ ಮೂಲಕ ಎಂಎಸ್ಸಿ ಕೃಷಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಿದ್ಯಾಭ್ಯಾಸದ ಜೊತೆಗೆ ಸಮಾಜಸೇವೆಯಲ್ಲೂ ಸಕ್ರಿಯರಾಗಿದ್ದ ಅವರು ಸಹಪಾಠಿಗಳ ಮೆಚ್ಚುಗೆ ಪಡೆದಿದ್ದರು.
ಮಾಹಿತಿಯ ಪ್ರಕಾರ, ಮಧ್ಯರಾತ್ರಿ 12ರಿಂದ 1 ಗಂಟೆಯ ನಡುವೆ ಆಕಾಶ್ ಹಲಸಿನ ಹಣ್ಣು ಕೀಳಲು ಮರ ಏರಿದ್ದರು. ಈ ವೇಳೆ ಕಾಲು ಜಾರಿ ಕೆಳಗೆ ಬಿದ್ದ ಪರಿಣಾಮ ತೀವ್ರ ಗಾಯಗಳಾಗಿವೆ. ಘಟನೆ ತಿಳಿದ ಕೂಡಲೇ ಸ್ನೇಹಿತರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಆಕಾಶ್ ಕೇವಲ ವಿದ್ಯಾರ್ಥಿಯಾಗಿರದೆ, ಎನ್ಎಸ್ಎಸ್ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದರು. ರಾಷ್ಟ್ರಪತಿಯಿಂದ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದಿದ್ದ ಅವರು, 2024ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಹೆಮ್ಮೆ ತಂದಿದ್ದರು.
ಘಟನೆ ತಿಳಿದು ಯಲಹಂಕ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಕಾಶ್ ಅವರ ಅಕಾಲಿಕ ನಿಧನ ಸ್ನೇಹಿತರು, ಶಿಕ್ಷಕರು ಹಾಗೂ ಕುಟುಂಬ ಸದಸ್ಯರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.



