ಕಬ್ಬು ಬೆಳೆಗಾರರಿಂದ ಇಂದು ಜೈಲ್ ಭರೋ ಚಳವಳಿ; ರೈತರು ಬೃಹತ್ ಹೋರಾಟಕ್ಕೆ ಸಜ್ಜು
Sugarcane Farmers Jail Bharo Protest: ಕಬ್ಬು ಬೆಳೆಗಾರರ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ರೈತ ಸಂಘ ನಿರ್ಧರಿಸಿದ್ದು, ಸೋಮವಾರ ಗುರ್ಲಾಪುರದಿಂದ ಹಿಂಡಲಗಾ ಜೈಲಿನವರೆಗೆ ಜೈಲ್ ಭರೋ ಚಳವಳಿ ನಡೆಸಲು ಸಿದ್ಧತೆ ಮಾಡಿಕೊಂಡಿದೆ.

ಬೆಳಗಾವಿ (Belagavi): ಕಬ್ಬು ಬೆಳೆಗಾರರ (Sugarcane Farmers) ಸಮಸ್ಯೆಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರೈತರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಹಲವು ದಿನಗಳಿಂದ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ರೈತರು ಇದೀಗ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ.
ಸೋಮವಾರ (ನ.2) ಗುರ್ಲಾಪುರದಿಂದ ಹಿಂಡಲಗಾ ಜೈಲಿನವರೆಗೆ ಜೈಲ್ ಭರೋ (Jail Bharo Protest) ಚಳವಳಿ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ (Chunappa Poojeri) ಘೋಷಿಸಿದ್ದಾರೆ.
ಬೆಳಗ್ಗೆ 11 ಗಂಟೆಗೆ ಗುರ್ಲಾಪುರದಿಂದ ಪ್ರತಿಭಟನೆ ಆರಂಭವಾಗಲಿದೆ. ರೈತರು ವಾರಕ್ಕೂ ಹೆಚ್ಚು ದಿನಗಳಿಂದ ಬಿಸಿಲಿನಲ್ಲಿ ಕುಳಿತು ನ್ಯಾಯಕ್ಕಾಗಿ ಕಾಯುತ್ತಿದ್ದರೂ ಸರ್ಕಾರದಿಂದ ಸಮರ್ಪಕ ಸ್ಪಂದನೆ ದೊರೆತಿಲ್ಲ ಎಂಬುದು ಸಂಘಟನೆಯ ಅಸಮಾಧಾನ. ರೈತರ ಸಂಕಷ್ಟಕ್ಕೆ ಮುಖ್ಯಮಂತ್ರಿ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪೂಜೇರಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಕಬ್ಬು ಬೆಳೆಗಾರರ ಹೋರಾಟ ಮತ್ತಷ್ಟು ತೀವ್ರ: ನಾಳೆ ಹಿಂಡಲಗಾ ಜೈಲಿಗೆ ರೈತರ ಚಲೋ!
ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಸಿಗಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ. ಪ್ರತಿ ಟನ್ ಕಬ್ಬಿಗೆ ಕಾರ್ಖಾನೆ ಮಾಲೀಕರು ₹4,500 ನೀಡಬೇಕು. ಇದರ ಜೊತೆಗೆ ರಾಜ್ಯ ಸರ್ಕಾರದಿಂದ ₹1,000 ನೆರವು (Financial Assistance) ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದ್ದಾರೆ.
ಅಗತ್ಯವಿದ್ದರೆ ಹೋರಾಟದಲ್ಲಿ ಭಾಗವಹಿಸುವ ಎಲ್ಲ ರೈತರನ್ನು ಜೈಲಿಗೆ ಕಳುಹಿಸಿದರೂ ಹಿಂದೆ ಸರಿಯುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಚೂನಪ್ಪ ಪೂಜೇರಿ ಹೇಳಿದ್ದಾರೆ.
ಇದನ್ನೂ ಓದಿ: ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ; ಸತೀಶ್ ಜಾರಕಿಹೊಳಿ ಹೇಳಿದ್ದೇನು ಗೊತ್ತಾ?
ಇನ್ನೊಂದೆಡೆ, ಪ್ರತಿಭಟನಾ ಸ್ಥಳದಲ್ಲಿ ರೈತರು ಮುಖ್ಯಮಂತ್ರಿ ಅವರ ಅಣಕು ಶವಯಾತ್ರೆ ನಡೆಸಿ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಮೂಲಕ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದರು. ಹೋರಾಟದ ವೇದಿಕೆಯಲ್ಲೇ ಕನ್ನಡ ರಾಜ್ಯೋತ್ಸವವನ್ನೂ ಆಚರಿಸಲಾಯಿತು.
ಪ್ರತಿಭಟನೆಗೆ ಸಾರ್ವಜನಿಕರಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಭಾನುವಾರ ರೈತರಿಗೆ ನೆರವಾಗಲು ಹಲವರು ಹಣಕಾಸಿನ ಸಹಾಯದ ಜೊತೆಗೆ ರೊಟ್ಟಿ, ದವಸಧಾನ್ಯಗಳನ್ನು ತಂದು ನೀಡಿದ್ದಾರೆ. ಶಶಿಕಾಂತ್ ಗುರೂಜಿ, ಸದಾಶಿವ ಕವಟಗಿ ಸ್ವಾಮಿಗಳು, ಮಲ್ಲಪ್ಪ ಅಂಗಡಿ, ಶ್ರೀಶೈಲ್ ಅಂಗಡಿ, ರಾಜಕುಮಾರ್ ಜಂಬಿಗಿ, ಎಂ.ಸಿ. ತಂಬೊಳಿ ಸೇರಿದಂತೆ ನೂರಾರು ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಇದೀಗ ಸೋಮವಾರದ ಜೈಲ್ ಭರೋ ಚಳವಳಿ ಯಾವ ಸ್ವರೂಪ ಪಡೆಯಲಿದೆ ಎಂಬ ಕುತೂಹಲ ಮೂಡಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.






