ಕಬ್ಬು ಬೆಳೆಗಾರರ ಪ್ರತಿಭಟನೆ: ಧಾರವಾಡ, ಹುಬ್ಬಳ್ಳಿಯಲ್ಲಿ ಹೆದ್ದಾರಿ ಬಂದ್ ಮಾಡಿ ಆಕ್ರೋಶ
Sugarcane Farmers: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕದಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ.

ಧಾರವಾಡ (Dharwad): ಕಬ್ಬು ಬೆಳೆಗಾರರ (Sugarcane Farmers) ಸಮಸ್ಯೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ರೈತರು ರಸ್ತೆಗಿಳಿದು ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದಾರೆ.
ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ (MSP) ಘೋಷಿಸಬೇಕು ಎಂದು ಆಗ್ರಹಿಸಿ ಶನಿವಾರ (ಅಕ್ಟೋಬರ್ 31) ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ರೈತರ ಹೋರಾಟದ ಪರಿಣಾಮ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಅವರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಆದರೂ ರೈತರು ತಮ್ಮ ಬೇಡಿಕೆಗಳಿಂದ ಹಿಂದೆ ಸರಿಯದೆ ವಿವಿಧ ಕಡೆಗಳಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಹಾಲಿನ ಬೆನ್ನಲ್ಲೇ ಮೊಸರು ದರ ಏರಿಕೆ; ಲೀಟರ್‌ಗೆ ಬರೋಬ್ಬರಿ ₹14 ರೂಪಾಯಿ ಹೆಚ್ಚಳ
₹5,600 ಬೆಲೆಗೆ ಪಟ್ಟು: ಯರಿಕೊಪ್ಪದಲ್ಲಿ ರೈತರ ಜಮಾವಣೆ
ಧಾರವಾಡದ ಯರಿಕೊಪ್ಪ ಬಳಿ ರೈತರು ಒಟ್ಟುಗೂಡಿ ಹೋರಾಟಕ್ಕೆ ಮುಂದಾಗಿದ್ದಾರೆ. ನಗರದ ಜ್ಯುಬಿಲಿ ವೃತ್ತದಲ್ಲಿಯೂ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಗಿದೆ. ಮತ್ತೊಂದೆಡೆ ಧಾರವಾಡ-ದಾಂಡೇಲಿ ರಾಜ್ಯ ಹೆದ್ದಾರಿ 28ರಲ್ಲಿ ರೈತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ನಿಗದಿ ಗ್ರಾಮದಲ್ಲಿಯೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮತ್ತು ಸ್ಥಳೀಯರು ಸೇರಿ ರಸ್ತೆ ತಡೆ ನಡೆಸಿದ್ದಾರೆ. ಇದರಿಂದ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಪರದಾಡುವಂತಾಗಿದೆ.
ಪ್ರತಿಭಟನಾಕಾರರು ಪ್ರತಿ ಟನ್ ಕಬ್ಬಿಗೆ 5,600 ರೂಪಾಯಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ: 3 ದಿನ ಭಾರೀ ಮಳೆ ಮುನ್ಸೂಚನೆ! ಬೆಂಗಳೂರು, ಹಾಸನ ಸೇರಿ ಗುಡುಗು, ಸಿಡಿಲು ಸಹಿತ ಮಳೆ ಸಾಧ್ಯತೆ
ಹುಬ್ಬಳ್ಳಿಯಲ್ಲೂ ರೈತರ ಪ್ರತಿಭಟನೆ: ಅಂಗಡಿಗಳನ್ನು ಮುಚ್ಚಿಸಿ ಧರಣಿ
ಧಾರವಾಡದ ಜೊತೆಗೆ ಹುಬ್ಬಳ್ಳಿಯಲ್ಲೂ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ. ಜಂಗ್ಲಿಪೇಟೆಯ ಬಸವೇಶ್ವರ ಸೇವಾ ಸಮಿತಿಯ ರೈತ ಸಂಘಟನೆ ಸದಸ್ಯರು ಹಳೇ ಹುಬ್ಬಳ್ಳಿಯ ದುರ್ಗದ ಬಯಲು ಮತ್ತು ಇಂಡಿಪಂಪ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಇಲ್ಲಿನ ರೈತರು ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ರೂಪಾಯಿ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನೆಗೆ ಸಹಕರಿಸುವಂತೆ ಸ್ಥಳೀಯ ಅಂಗಡಿ ಮಾಲೀಕರಲ್ಲಿ ಮನವಿ ಮಾಡಿ, ಚನ್ನಪೇಟೆ, ಗೌಳಿಗಲ್ಲಿ, ಹಿರೇಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.
ಇದಲ್ಲದೆ ಪ್ರಮುಖ ವೃತ್ತಗಳಲ್ಲಿ ವಾಹನ ಸಂಚಾರ ತಡೆದು ಧರಣಿ ನಡೆಸಿದ್ದಾರೆ. ಕೆಲವು ರೈತರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ಕಬ್ಬು ಬೆಳೆಗಾರರ ಪರ ನಿಲ್ಲಲು ಮನವಿ; ಇಂದು ಸ್ವಯಂಪ್ರೇರಿತ ಕರ್ನಾಟಕ ಬಂದ್‌ಗೆ ಕರೆ
ಇಳುವರಿ ಕುಸಿತದಿಂದ ರೈತರಿಗೆ ಮತ್ತಷ್ಟು ಸಂಕಷ್ಟ
ಈ ಬಾರಿ ಬರಗಾಲದ ಪರಿಣಾಮ ಕಬ್ಬಿನ ಇಳುವರಿಯೂ ಕಡಿಮೆಯಾಗಿದೆ. ಈಗಾಗಲೇ ಕೃಷಿ ವೆಚ್ಚ ಹೆಚ್ಚಾಗಿರುವುದರಿಂದ ಸೂಕ್ತ ಬೆಲೆ ಸಿಗದಿದ್ದರೆ ರೈತರು ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
ಕಬ್ಬಿಗೆ ನ್ಯಾಯಯುತ ಬೆಲೆ ನೀಡದಿದ್ದರೆ ಬೆಳೆಗಾರರಿಗೆ ನಷ್ಟವಾಗುವುದು ಖಚಿತ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಮಧ್ಯಪ್ರವೇಶಿಸಿ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ರೈತ ಮುಖಂಡರು ನೀಡಿದ್ದಾರೆ. ಹೀಗಾಗಿ ಕಬ್ಬು ಬೆಳೆಗಾರರ ಪ್ರತಿಭಟನೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.






