ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು! ಆಳವಾದ ನೀರಿನಲ್ಲಿ ಮುಳುಗಿ ಸಾವು

ಉಡುಪಿಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಬಳಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ಸುವರ್ಣ ನದಿಯ ಆಳವಾದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಕುಟುಂಬದಲ್ಲಿ ದುಃಖ ಆವರಿಸಿದೆ.

ಉಡುಪಿ (Udupi): ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ಸುವರ್ಣ ನದಿಯಲ್ಲಿ (Suvarna River) ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಹೆರ್ಮುಂಡೆಯಲ್ಲಿ ನಡೆದಿದೆ.

ಮೃತರನ್ನು ಭರತ್ ಪೂಜಾರಿ (Bharath Poojari) ಹಾಗೂ ಹರ್ಷನ್ ಆಚಾರ್ಯ (Harshan Acharya) ಎಂದು ಗುರುತಿಸಲಾಗಿದೆ. ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಐವರು ಸ್ನೇಹಿತರು ಒಟ್ಟಾಗಿ ನದಿಗೆ ತೆರಳಿದ್ದರು. ಮಂಗಿಲಾರು ಮೂಲಕ ಸುಮಾರು ಎರಡು ಕಿಲೋಮೀಟರ್ ದುರ್ಗಮ ದಾರಿ ಕ್ರಮಿಸಿ ಅವರು ಸ್ಥಳಕ್ಕೆ ತಲುಪಿದ್ದರು ಎನ್ನಲಾಗಿದೆ.

ನದಿಯಲ್ಲಿ ಈಜುತ್ತಿದ್ದ ವೇಳೆ ಭರತ್ ಹಾಗೂ ಹರ್ಷನ್ ಆಳವಾದ ನೀರಿನ ಕಡೆಗೆ ತೆರಳಿದ್ದು, ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ಸ್ನೇಹಿತರು ರಕ್ಷಿಸಲು ಪ್ರಯತ್ನಿಸಿದರೂ ಅವರನ್ನು ತಕ್ಷಣ ಮೇಲಕ್ಕೆತ್ತಲು ಸಾಧ್ಯವಾಗಿರಲಿಲ್ಲ.

ಘಟನಾ ಸ್ಥಳಕ್ಕೆ ವಾಹನ ತೆರಳಲು ಯಾವುದೇ ರಸ್ತೆ ಸಂಪರ್ಕವಿಲ್ಲದ ಕಾರಣ ರಕ್ಷಣಾ ಕಾರ್ಯಾಚರಣೆ (Rescue Operation) ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿತು. ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಕಿಲೋಮೀಟರ್ ನಡೆದುಕೊಂಡು ಸ್ಥಳಕ್ಕೆ ತಲುಪಿದರು.

ಸ್ಥಳೀಯರ ಸಹಕಾರದೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಮೂರು ಗಂಟೆಗೂ ಹೆಚ್ಚು ಕಾಲ ಶೋಧ ಕಾರ್ಯ ನಡೆಸಿದರು. ಕೊನೆಗೆ ಇಬ್ಬರು ಯುವಕರ ಮೃತದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲಾಯಿತು. ಠಾಣಾಧಿಕಾರಿ ಸಂಜೀವ ದೇವಾಡಿಗ (Sanjeeva Devadiga) ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಭರತ್ ಪೇಂಟಿಂಗ್ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು. ಸ್ವಂತ ಮನೆ ನಿರ್ಮಿಸಿಕೊಳ್ಳಬೇಕು ಎಂಬುದು ಅವರ ಬಹುದಿನಗಳ ಕನಸಾಗಿತ್ತು. ಮನೆಯ ಕಾಮಗಾರಿ ಈಗಾಗಲೇ ಸ್ಲಾಬ್ ಹಂತ ತಲುಪಿದ್ದು, ಶೀಘ್ರದಲ್ಲೇ ಗೃಹಪ್ರವೇಶ ಮಾಡುವ ನಿರೀಕ್ಷೆಯಲ್ಲಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಆದರೆ ಈ ದುರಂತದಿಂದ ಕುಟುಂಬದ ಸಂತಸ ಕ್ಷಣಾರ್ಧದಲ್ಲಿ ದುಃಖವಾಗಿ ಮಾರ್ಪಟ್ಟಿದೆ. ಇಬ್ಬರು ಯುವಕರನ್ನು ಕಳೆದುಕೊಂಡ ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories