ಮಾಜಿ ಪ್ರಿಯಕರನ ಜೊತೆ ಸೇರಿ ಹಾಲಿ ಪ್ರಿಯಕರನ ಕೊಲೆ ಮಾಡಿಸಿದ ಮಹಿಳೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಹಾಲಿ ಪ್ರಿಯಕರನನ್ನು ಮಾಜಿ ಪ್ರಿಯಕರನ ಸಹಾಯದಿಂದ ಹತ್ಯೆ ಮಾಡಿಸಿದ ಆರೋಪದಲ್ಲಿ ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ನಡೆದಿರುವ ಕೊಲೆ ಪ್ರಕರಣವೊಂದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಾಲಿ ಪ್ರಿಯಕರನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯೊಬ್ಬರು ತನ್ನ ಮಾಜಿ ಪ್ರಿಯಕರನ ಸಹಾಯದಿಂದ ಆತನನ್ನೇ ಹತ್ಯೆ ಮಾಡಿಸಿರುವ ಆರೋಪ ಕೇಳಿಬಂದಿದೆ.

ಹತ್ಯೆಗೀಡಾದ ವ್ಯಕ್ತಿಯನ್ನು ಬಳ್ಳಿಗೇರಿಯ ರಣವೀರಸಿಂಗ್ ರಜಪೂತ (Ranveersingh Rajput), 32, ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀದೇವಿ ರಜಪೂತ (Sridevi Rajput) ಹಾಗೂ ವಿಜಯಪುರ ಜಿಲ್ಲೆಯ ರೋಣಿಹಾಳದ ಬೈರು ಪವಾರ್ (Bairu Pawar) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀದೇವಿ ಹಾಗೂ ರಣವೀರಸಿಂಗ್ ನಡುವೆ ಕಳೆದ ಐದಾರು ವರ್ಷಗಳಿಂದ ರಹಸ್ಯ ಸಂಬಂಧವಿತ್ತು ಎನ್ನಲಾಗಿದೆ. ಆದರೆ, ಶ್ರೀದೇವಿಯ ಪುತ್ರಿಯನ್ನು ರಣವೀರಸಿಂಗ್ ಅವರ ಸೋದರ ಸಂಬಂಧಿ ನಾರಾಯಣ್‌ಗೆ ಮದುವೆ ಮಾಡಿಕೊಡುವಂತೆ ಆತನ ಕುಟುಂಬದವರು ಕೇಳಿದ ಬಳಿಕ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ನೀರಿಗಿಳಿದ ತಾಯಿ, ಮಗ ಸಾವು! ಶ್ರೀನಿವಾಸ ಸಾಗರ ಡ್ಯಾಮ್‌ನಲ್ಲಿ ದುರಂತ

ಮಗಳ ಮದುವೆ ವಿಚಾರದಲ್ಲಿ ಶ್ರೀದೇವಿ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ರಣವೀರಸಿಂಗ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಳು ಎನ್ನಲಾಗಿದೆ. ಇದೇ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಈ ನಡುವೆ ರಣವೀರಸಿಂಗ್ ಕಿರುಕುಳ ನೀಡುತ್ತಿದ್ದಾನೆ ಎಂದು ಶ್ರೀದೇವಿ ಆರೋಪಿಸಿದ್ದಾಳೆ.

ಶ್ರೀದೇವಿ ಸುಮಾರು 20 ವರ್ಷಗಳ ಹಿಂದೆ ಬಳ್ಳಿಗೇರಿಯ ಯುವಕನನ್ನು ಮದುವೆಯಾಗಿದ್ದಳು. ಅದಕ್ಕೂ ಮುನ್ನ ಶಾಲಾ ದಿನಗಳಲ್ಲೇ ರೋಣಿಹಾಳದ ಬೈರು ಪವಾರ್ ಹಾಗೂ ಶ್ರೀದೇವಿ ನಡುವೆ ಪ್ರೀತಿ ಇತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ರಣವೀರಸಿಂಗ್‌ನಿಂದ ಕಿರುಕುಳವಾಗುತ್ತಿರುವುದಾಗಿ ಶ್ರೀದೇವಿ ಬೈರು ಪವಾರ್‌ಗೆ ಹೇಳಿಕೊಂಡಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: ಲಗೇಜ್ ಆಟೋ ಡಿಕ್ಕಿ: ರಸ್ತೆ ಬದಿಯಲ್ಲಿ ನಿಂತಿದ್ದ 8 ವರ್ಷದ ಬಾಲಕ ಸಾವು

ಇದಾದ ಬಳಿಕ ಇಬ್ಬರೂ ಭೇಟಿಯಾಗಿ ರಣವೀರಸಿಂಗ್‌ನನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಯೋಜನೆಯಂತೆ ಬೈರು ಪವಾರ್ ಬಳ್ಳಿಗೇರಿಗೆ ಬಂದು ರಣವೀರಸಿಂಗ್‌ನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂಬ ಆರೋಪವಿದೆ. ಘಟನೆ ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಪ್ರಕರಣದ ತನಿಖೆ ನಡೆಸಿದ ಅಥಣಿ ಪೊಲೀಸರು ಕಾಲ್ ಡಿಟೇಲ್ಸ್ ಹಿಸ್ಟರಿ (Call Detail History) ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ದೊರೆತ ಮಾಹಿತಿಯ ಆಧಾರದ ಮೇಲೆ ಶ್ರೀದೇವಿ ಹಾಗೂ ಬೈರು ಪವಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಲಾಗಿದೆ.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories