ಶಸ್ತ್ರಚಿಕಿತ್ಸೆ ಬಳಿಕ ಬಾಣಂತಿ ಸಾವು! ಚಿಂತಾಮಣಿ ಸರ್ಕಾರಿ ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ
ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಕೆಲವೇ ದಿನಗಳಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ವೈದ್ಯರ ಎಡವಟ್ಟೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಎದುರು ಮೃತದೇಹವಿಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದರು.
ಬಟ್ಲಹಳ್ಳಿ ಗ್ರಾಮದ ನಿವಾಸಿ ನರ್ಮದಾ ಜಿ.ಎನ್ (24) ಮೃತ ಮಹಿಳೆ. ಇಬ್ಬರು ಮಕ್ಕಳ ತಾಯಿಯಾಗಿದ್ದ ನರ್ಮದಾ ಕುಟುಂಬ ನಿಯಂತ್ರಣದ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರು ಸಣ್ಣ ಕರಳಿಗೆ ಹಾನಿ ಮಾಡಿದ್ದರಿಂದ ಸೋಂಕು ಹರಡಿ ಆರೋಗ್ಯ ಹದಗೆಟ್ಟಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಸ್ಥಿತಿ ಗಂಭೀರವಾದ ಬಳಿಕ ಚಿಕಿತ್ಸೆ ನೀಡಲಾಗಿದ್ದರೂ ನರ್ಮದಾ ಬದುಕುಳಿಯಲಿಲ್ಲ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ನೇರ ಕಾರಣ ಎಂದು ಹೇಳಿರುವ ಕುಟುಂಬಸ್ಥರು, ಸಂಬಂಧಪಟ್ಟ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಘಟನೆ ಬಳಿಕ ಆಸ್ಪತ್ರೆ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಲಾಗಿದ್ದು, ಸ್ತ್ರೀರೋಗ ತಜ್ಞೆ ಡಾ. ವಾಣಿ ರೆಡ್ಡಿ ಮತ್ತು ಡಾ. ನಾರಾಯಣಸ್ವಾಮಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. “ಶಸ್ತ್ರಚಿಕಿತ್ಸೆ ವೇಳೆ ನಡೆದ ತಪ್ಪನ್ನು ಮರೆಮಾಚಲಾಗಿದೆ” ಎಂದು ಮೃತಳ ಕುಟುಂಬ ಆರೋಪಿಸಿದೆ.
ಇತ್ತ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿರುವ ಡಾ. ವಾಣಿ ರೆಡ್ಡಿ, “ಶಸ್ತ್ರಚಿಕಿತ್ಸೆ ಸಮಯದಲ್ಲಿ ಸಣ್ಣ ಕರಳು ಅಂಟಿಕೊಂಡಿದ್ದರಿಂದ ಬಿಡಿಸುವಾಗ ಸ್ವಲ್ಪ ಹಾನಿಯಾಗಿತ್ತು. ತಕ್ಷಣವೇ ಚಿಕಿತ್ಸೆ ನೀಡಲಾಗಿತ್ತು. ನರ್ಮದಾ ಗುಣಮುಖರಾಗಿ ಮನೆಗೆ ತೆರಳಿದ್ದರು. ಬಳಿಕ ಮನೆಯಲ್ಲಿ ಏನಾಯಿತೋ ಗೊತ್ತಿಲ್ಲ, ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಘಟನೆ ಇದೀಗ ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ಮತ್ತೆ ಪ್ರಶ್ನೆ ಹುಟ್ಟುಹಾಕಿದ್ದು, ಮೃತ ಮಹಿಳೆಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬ ಒತ್ತಾಯ ಹೆಚ್ಚಾಗಿದೆ.



