ಘೋರ ದುರಂತ: ಕಸ ವಿಂಗಡಣೆ ಯಂತ್ರದಲ್ಲಿ ಸಿಲುಕಿ ಮಹಿಳೆ ಸಾವು, ತುಂಡು ತುಂಡಾದ ದೇಹ
ದೊಡ್ಡಬಳ್ಳಾಪುರದ ಎಂಎಸ್‌ಜಿಪಿ ಕಸ ವಿಂಗಡಣೆ ಘಟಕದಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ಮಹಿಳೆ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದು, ಘಟನಾ ಸ್ಥಳದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿತ್ತು.

- ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ 45 ವರ್ಷದ ಮಹಿಳೆ ಸಾವು.
- ಎಂಎಸ್‌ಜಿಪಿ ಘಟಕದಲ್ಲಿ ಬೆಳಗ್ಗೆ ಕೆಲಸದ ವೇಳೆ ದುರ್ಘಟನೆ.
- ಮೂರ್ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮಹಿಳೆ
ಚಿಕ್ಕಬಳ್ಳಾಪುರ (Chikkaballapur), ಅಕ್ಟೋಬರ್ 2: ಕಸ ವಿಂಗಡಣೆ ಮಾಡುವ ವೇಳೆ ಸಂಭವಿಸಿದ ಭೀಕರ ಅವಘಡದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರದ ಎಂಎಸ್‌ಜಿಪಿ ಘಟಕದಲ್ಲಿ ನಡೆದಿದೆ. ಯಂತ್ರದ ಬಳಿ ಕೆಲಸ ಮಾಡುವ ವೇಳೆ ಮಹಿಳೆ ಸಿಲುಕಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾಡತಿಪ್ಪೂರು ಮೂಲದ ಅರಸಮ್ಮ (45) ಮೃತ ಮಹಿಳೆ. ಅವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ಘಟಕದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಸಂಗ್ರಹಿಸಿ ತರಲಾಗುತ್ತಿದ್ದ ಕಸವನ್ನು ಘಟಕದಲ್ಲಿ ವಿಂಗಡಿಸುವ ಕೆಲಸ ನಡೆಯುತ್ತಿತ್ತು.
ಅಕ್ಟೋಬರ್ 2ರ ಬೆಳಗ್ಗೆ ಎಂದಿನಂತೆ ಕಸ ವಿಂಗಡಣೆ (Waste Segregation) ಕಾರ್ಯ ನಡೆಯುತ್ತಿದ್ದ ವೇಳೆ ಅರಸಮ್ಮ ಯಂತ್ರದೊಳಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಯ ಪರಿಣಾಮ ಅವರ ಕೈ ಮತ್ತು ಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿದ್ದು, ದೇಹದ ಭಾಗಗಳು ತುಂಡಾಗಿವೆ ಎಂದು ವರದಿಯಾಗಿದೆ.
ಅವಘಡದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯು ದೊಡ್ಡಬೆಳವಂಗಲ ಪೊಲೀಸ್ ಠಾಣೆ (Police Station) ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಯಂತ್ರದ ಕಾರ್ಯಾಚರಣೆ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



