ಹೊಸ ಬೈಕ್ ಖರೀದಿಸಿದ ಮರುದಿನವೇ ಯುವಕನ ಜೀವ ಕಸಿದ ಅಪಘಾತ
ತುಮಕೂರು ಜಿಲ್ಲೆಯ ಪಾವಗಡ ಸಮೀಪ ಹೊಸ ಬೈಕ್‌ನಲ್ಲಿ ಸ್ನೇಹಿತನೊಂದಿಗೆ ಮನೆಗೆ ಮರಳುತ್ತಿದ್ದ 19 ವರ್ಷದ ಯುವಕ ಟಿಪ್ಪರ್ ಡಿಕ್ಕಿಗೆ ಬಲಿಯಾಗಿದ್ದು, ಹಿಂಬದಿ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ತುಮಕೂರು, ಜೂನ್ 26: ಹೊಸ ಬೈಕ್ ಖರೀದಿಸಿದ ಸಂಭ್ರಮ ಮರುದಿನವೇ ಶೋಕವಾಗಿ ಮಾರ್ಪಟ್ಟ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ನಡೆದಿದೆ. ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ 19 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಯುವಕನನ್ನು ಪಾವಗಡ ತಾಲೂಕಿನ ದೊಡ್ಡಹಳ್ಳಿ ನಿವಾಸಿ ನಂದೀಶ್ ಕುಮಾರ್ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಹೊಸ ಬೈಕ್ ಖರೀದಿಸಿದ್ದ ಆತ, ಸ್ನೇಹಿತನೊಂದಿಗೆ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ವೈಎನ್ ಹೊಸಕೋಟೆ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಂದೀಶ್ ಕುಮಾರ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನ ಹಿಂಬದಿ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಳಿಕ ಸ್ಥಳಕ್ಕೆ ಪಾವಗಡ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇನ್ನೊಂದು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಧಾರವಾಡ ಜಿಲ್ಲೆಯ ಬೇಲೂರು ಸಮೀಪ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.



