ಮೊಬೈಲ್‌ ವಿಚಾರಕ್ಕೆ ಚಾಕುವಿನಿಂದ ಇರಿದು ಅಣ್ಣನ ಕೊಲೆ ಮಾಡಿದ ತಮ್ಮ!

ಮಂಗಳೂರಿನ ಬಿಜೈ ಕೊಟ್ಟಾರ ಕ್ರಾಸ್‌ನಲ್ಲಿ ಮೊಬೈಲ್‌ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ತಮ್ಮ ಚಾಕುವಿನಿಂದ ಇರಿದ ಪರಿಣಾಮ ಅಣ್ಣ ಮೃತಪಟ್ಟಿದ್ದಾರೆ.

ಮಂಗಳೂರು (Mangaluru), ಆಗಸ್ಟ್ 31: ಮೊಬೈಲ್‌ ಬಳಕೆಯ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಮಂಗಳೂರಿನ ಬಿಜೈ ಕೊಟ್ಟಾರ ಕ್ರಾಸ್‌ ಬಳಿ ಭಾನುವಾರ ತಡರಾತ್ರಿ ನಡೆದಿದೆ. ತಮ್ಮನೇ ಅಣ್ಣನಿಗೆ ಚಾಕುವಿನಿಂದ ಇರಿದಿರುವ ಆರೋಪ ಕೇಳಿಬಂದಿದೆ.

ಘಟನೆಯಲ್ಲಿ 40 ವರ್ಷದ ಅಡಿವೆಪ್ಪ ಮೃತಪಟ್ಟಿದ್ದು, ಅವರ ತಮ್ಮ ರಾಜು (36) ಕೊಲೆ ಆರೋಪ ಎದುರಿಸುತ್ತಿದ್ದಾರೆ. ಇಬ್ಬರೂ ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರಾಗಿದ್ದು, ಕೆಲಕಾಲದಿಂದ ತಾಯಿ ಜೊತೆ ಕೊಟ್ಟಾರ ಕ್ರಾಸ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಭಾನುವಾರ ರಾತ್ರಿ ಸುಮಾರು 10.30ರಿಂದ 11 ಗಂಟೆಯ ನಡುವೆ ಸಹೋದರರ ನಡುವೆ ಗಲಾಟೆ ನಡೆದಿತ್ತು. ಇಬ್ಬರಿಗೂ ಮದ್ಯಪಾನದ (Alcohol) ಚಟವಿತ್ತು ಎಂದು ತಿಳಿದುಬಂದಿದೆ. ಈ ವೇಳೆ ಮೊಬೈಲ್‌ ವಿಚಾರಕ್ಕೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ಜಗಳ ತೀವ್ರಗೊಂಡಿದೆ ಎನ್ನಲಾಗಿದೆ.

ಈ ನಡುವೆ ತಾಯಿ ತಮ್ಮ ಸಣ್ಣ ಗೂಡಂಗಡಿ ಮುಚ್ಚಿಕೊಂಡು ಮನೆಗೆ ವಾಪಸ್‌ ಬಂದಾಗ ದೊಡ್ಡ ಮಗ ಅಡಿವೆಪ್ಪ ಗಂಭೀರವಾಗಿ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ (Wenlock Hospital) ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಕುಟುಂಬವು ಮೂಲತಃ ಬೈಲಹೊಂಗಲದವರಾಗಿದ್ದು, ತಾಯಿ ಅಂಗಡಿ ನಡೆಸುತ್ತಿದ್ದರು. ಇಬ್ಬರು ಸಹೋದರರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸಣ್ಣ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವುದು ಕುಟುಂಬಸ್ಥರಲ್ಲಿ ಆಘಾತ ಮೂಡಿಸಿದೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಉರ್ವ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ರಾಜು ವಿರುದ್ಧ ಪ್ರಕರಣ ದಾಖಲಿಸಿಕೊಂಡು (Police Investigation) ತನಿಖೆ ಮುಂದುವರಿಸಿದ್ದಾರೆ. ಘಟನೆಗೆ ನಿಖರ ಕಾರಣ ಹಾಗೂ ಕೊಲೆಗೆ ಸಂಬಂಧಿಸಿದ ಇತರ ವಿವರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

English Summary▼

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories