ನಿಂತಿದ್ದ ಬಸ್ಸಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ! ಇಬ್ಬರ ಬಂಧನ, ಬಸ್ ವಶಕ್ಕೆ
ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ನಿಂತಿದ್ದ ಸ್ಲೀಪರ್ ಬಸ್ಸಿನೊಳಗೆ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

- ಬಸ್ ಚಾಲಕ ಮತ್ತು ನಿರ್ವಾಹಕ ಬಂಧನ
- ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆ
- ಪ್ರಕರಣದ ಬಗ್ಗೆ ಪೊಲೀಸರು ತೀವ್ರ ತನಿಖೆ ಆರಂಭ
ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕುರಿತ ಆತಂಕ ಮತ್ತೊಮ್ಮೆ ಹೆಚ್ಚಾಗಿದೆ. ನಂಗ್ಲೋಯಿ ಪ್ರದೇಶದಲ್ಲಿ ನಿಂತಿದ್ದ ಸ್ಲೀಪರ್ ಬಸ್ಸಿನೊಳಗೆ ಮಹಿಳೆಯ ಮೇಲೆ ಸಾಮೂಹಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಮೇ 11ರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಮಹಿಳೆ ಸರಸ್ವತಿ ವಿಹಾರ್ ಬಸ್ ನಿಲ್ದಾಣದ ಬಳಿ ನಿಂತಿದ್ದ ಬಸ್ಸಿನ ಬಳಿ ಸಮಯ ಕೇಳಲು ಹೋಗಿದ್ದರು. ಈ ವೇಳೆ ಅಲ್ಲಿದ್ದ ವ್ಯಕ್ತಿಗಳು ಆಕೆಯನ್ನು ಬಲವಂತವಾಗಿ ಬಸ್ಸಿನೊಳಗೆ ಎಳೆದೊಯ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಬಸ್ಸನ್ನು ನಂಗ್ಲೋಯಿ ಭಾಗದ ಕಡೆಗೆ ಕೊಂಡೊಯ್ದು ಅಮಾನವೀಯ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತ ಮಹಿಳೆ ಮಂಗೋಲಪುರಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಮೂವರು ಮಕ್ಕಳ ತಾಯಿ ಎಂದು ತಿಳಿದುಬಂದಿದೆ.
ದೂರು ದಾಖಲಾದ ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾದ ಸ್ಲೀಪರ್ ಬಸ್ಸನ್ನೂ ವಶಪಡಿಸಿಕೊಳ್ಳಲಾಗಿದೆ.
ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಪ್ರಕರಣದ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆಯ ಬಳಿಕ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮಹಿಳಾ ಸುರಕ್ಷತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ.


