ಸರ್ಕಾರಿ ಉದ್ಯೋಗ, ಎಸ್‌ಎಸ್‌ಎಲ್‌ಸಿ ಆಗಿದ್ರೆ ಸಾಕು! ಜಿಲ್ಲಾ ನ್ಯಾಯಾಲಯದಲ್ಲಿ 86 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿ 86 ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದ್ದು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅರ್ಹತೆಯ ಅಭ್ಯರ್ಥಿಗಳಿಗೆ ಅವಕಾಶವಿದೆ. ನವೆಂಬರ್ 6 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಬೆಂಗಳೂರು (Bengaluru): ಸರ್ಕಾರಿ ಉದ್ಯೋಗ (Government Jobs) ಪಡೆಯುವ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಿಂದ ಅವಕಾಶ ದೊರೆತಿದೆ.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 86 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿಯಲ್ಲಿ ಜವಾನ ಹುದ್ದೆಗಳಿಗೆ ಹೆಚ್ಚಿನ ಅವಕಾಶಗಳಿವೆ. ಒಟ್ಟು 36 ಜವಾನ, 24 ಆದೇಶ ಜಾರಿಕಾರ, 8 ಬೆರಳಚ್ಚುಗಾರ ಹಾಗೂ 18 ನಕಲು-ಬೆರಳಚ್ಚುಗಾರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಬೆರಳಚ್ಚುಗಾರ ಹುದ್ದೆಗಳ ಪೈಕಿ ಎರಡು ಬ್ಯಾಕ್‌ಲಾಗ್ ಹುದ್ದೆಗಳು ಸೇರಿವೆ.

ಇದನ್ನೂ ಓದಿ: ಕರ್ನಾಟಕ ಮಳೆ ಮುನ್ಸೂಚನೆ; ಮುಂದಿನ 2 ದಿನ ರಾತ್ರಿ-ಹಗಲು ಮಳೆ! ಬೆಂಗಳೂರು ಮಂದಿಗೂ ಅಲರ್ಟ್

ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ (Salary) ನಿಗದಿಪಡಿಸಲಾಗಿದೆ. ಜವಾನ ಹುದ್ದೆಗೆ 27,000ರಿಂದ 46,675 ರೂ., ಆದೇಶ ಜಾರಿಕಾರ ಹುದ್ದೆಗೆ 31,775ರಿಂದ 61,300 ರೂ. ವೇತನ ದೊರೆಯಲಿದೆ. ಬೆರಳಚ್ಚುಗಾರ ಮತ್ತು ನಕಲು-ಬೆರಳಚ್ಚುಗಾರ ಹುದ್ದೆಗಳಿಗೆ 34,100ರಿಂದ 67,600 ರೂ.ವರೆಗೆ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

ಶೈಕ್ಷಣಿಕ ಅರ್ಹತೆಯ ವಿಚಾರದಲ್ಲಿ ಜವಾನ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ಆದೇಶ ಜಾರಿಕಾರ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಅರ್ಹತೆಯ ಜೊತೆಗೆ ಅಧಿಸೂಚನೆಯಲ್ಲಿ ತಿಳಿಸಿರುವ ಚಾಲನಾ ಪರವಾನಗಿ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

Job

ಬೆರಳಚ್ಚುಗಾರ ಮತ್ತು ನಕಲು-ಬೆರಳಚ್ಚುಗಾರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ ಕಮರ್ಷಿಯಲ್ ಪ್ರಾಕ್ಟೀಸ್ ಡಿಪ್ಲೊಮಾ ಜೊತೆಗೆ ಅಗತ್ಯವಾದ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಬೆರಳಚ್ಚುಗಾರ ಹುದ್ದೆಗೆ ಹಿರಿಯ ಶ್ರೇಣಿ (Senior Grade), ನಕಲು-ಬೆರಳಚ್ಚುಗಾರ ಹುದ್ದೆಗೆ ಕಿರಿಯ ಶ್ರೇಣಿ (Junior Grade) ಅರ್ಹತೆ ಅಗತ್ಯವಾಗಿದೆ. ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನವೂ ಕಡ್ಡಾಯವಾಗಿದೆ.

ಇದನ್ನೂ ಓದಿ: ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿ ವತಿಯಿಂದ 3,000 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ

ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿಯಲ್ಲಿ (Age Limit) ಒಂದು ಬಾರಿಯ ವಿಶೇಷ ಐದು ವರ್ಷಗಳ ಸಡಿಲಿಕೆಯನ್ನು ಘೋಷಿಸಲಾಗಿದೆ. ಅದರಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ, 2A, 2B, 3A ಮತ್ತು 3B ಪ್ರವರ್ಗದ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕದ ವಿವರಗಳ ಪ್ರಕಾರ, ಸಾಮಾನ್ಯ ವರ್ಗದ ಅಭ್ಯರ್ಥಿಗಳು 200 ರೂ. ಪಾವತಿಸಬೇಕು. 2A, 2B, 3A ಮತ್ತು 3B ಪ್ರವರ್ಗದವರಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಆಸಕ್ತ ಅಭ್ಯರ್ಥಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ bengalururural.dcourts.gov.in ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಪ್ರಕ್ರಿಯೆ ಅಕ್ಟೋಬರ್ 7ರಿಂದ ಆರಂಭವಾಗಿದ್ದು, ನವೆಂಬರ್ 6 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ಹುದ್ದೆಗಳ ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಪರಿಶೀಲಿಸುವುದು ಉತ್ತಮ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories