ಬೆಂಗಳೂರು 2ನೇ ವಿಮಾನ ನಿಲ್ದಾಣ ಪ್ರಸ್ತಾಪ, ದೆಹಲಿಯಲ್ಲಿ ತುರ್ತು ಚರ್ಚೆ - Bengaluru Second Airport

ಬೆಂಗಳೂರು (Bengaluru) ನಗರಕ್ಕೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಿರ್ಧಾರ ಹಂತ ತಲುಪಿದ್ದು, ಸಚಿವ ಎಂ.ಬಿ. ಪಾಟೀಲ್ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದ್ದು ಗಮನಾರ್ಹ.

  • ಬೆಂಗಳೂರು 2ನೇ ವಿಮಾನ ನಿಲ್ದಾಣ ಪ್ರಸ್ತಾಪ
  • ಎಂ.ಬಿ. ಪಾಟೀಲ್ ಮತ್ತು ಕೇಂದ್ರ ಸಚಿವರ ಮಧ್ಯೆ ಚರ್ಚೆ
  • ಮಹದಾಯಿ ವಿವಾದದ ಕುರಿತು ರಾಜ್ಯದ ಗಂಭೀರ ಆಕ್ರೋಶ

ಬೆಂಗಳೂರಿಗೆ (Bengaluru) ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಗತ್ಯವಿದೆ ಎಂಬ ಮಾತು ಹಲವು ತಿಂಗಳಿಂದ ಚರ್ಚೆಯಾಗುತ್ತಿದ್ದರೂ, ಈಗ ಅದಕ್ಕೆ ಚುರುಕಾಗಿ ಕ್ರಮಗಳಾಗುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ದೆಹಲಿಗೆ ಭೇಟಿ ನೀಡಿ, ಕೇಂದ್ರ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿದ್ದಾರೆ.

ವಿಮಾನ ನಿಲ್ದಾಣದ ಪ್ರಸ್ತಾಪದ ಜೊತೆಗೆ, ಮೈಸೂರು (Mysuru), ಶಿವಮೊಗ್ಗ (Shivamogga), ವಿಜಯಪುರ, ಕಲಬುರಗಿ (Kalaburagi), ಹಾಸನ ಸೇರಿದಂತೆ ರಾಜ್ಯದ ಇನ್ನಿತರ ವಿಮಾನ ನಿಲ್ದಾಣಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (Airports Authority of India) ವಶಕ್ಕೆ ನೀಡುವ ಬಗ್ಗೆ ಸಹ ಸಚಿವರು ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ಕೊಳಕು ಮುಕ್ತ ಬೆಂಗಳೂರು ಮಾಡೋಕೆ ಬಿಬಿಎಂಪಿಯಿಂದ ಭರ್ಜರಿ ಕ್ಲೀನಿಂಗ್

ಪಾಟೀಲ್ ತಿಳಿಸಿದಂತೆ, ಕೇಂದ್ರದ ಅಧಿಕಾರಿಗಳು ಬೆಂಗಳೂರು ಪರಿಸರಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿ, ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಮುಂದಿನ ಹಂತದ ತಯಾರಿಗೆ ಆ ವರದಿ ತಕ್ಷಣ ಹಸ್ತಾಂತರವಾಗಬೇಕೆಂದು ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ. ಒಂದು ನಿರ್ಧಿಷ್ಟ ಸ್ಥಳದ ಆಯ್ಕೆ ಆಗಿದೆಯೆಂದರೆ, ತಕ್ಷಣವೇ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆ ಮಂತ್ರಿಗಳೊಂದಿಗೆ ಚರ್ಚೆ ಆರಂಭಿಸಲಾಗುವುದು ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮಹದಾಯಿ ನದಿ ಯೋಜನೆಯ ಕುರಿತಂತೆ ಮಾತನಾಡಿದ ಪಾಟೀಲ್, ಕೇಂದ್ರ ಸರ್ಕಾರ ಈ ಯೋಜನೆಗೆ ಈಗಾಗಲೇ ಅನುಮತಿ ನೀಡಿದರೂ, ಗೋವಾ ಸರ್ಕಾರ ತಕರಾರು ಎಬ್ಬಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಇರುವ ಎರಡು ರಾಜ್ಯಗಳಲ್ಲಿ ಈ ಯೋಜನೆಗೆ ರಾಜಕೀಯ ತಡೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಪವರ್ ಕಟ್, ಶನಿವಾರ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

ಪಾಟೀಲ್ ಅಭಿಪ್ರಾಯಪಟ್ಟಂತೆ, ಮಹದಾಯಿ ಬಗ್ಗೆ ಈಗಾಗಲೇ ಟ್ರಿಬ್ಯೂನಲ್ ಆದೇಶವಾಗಿದೆ. ಇದೇ ಕಾರಣಕ್ಕೆ ಬಿಜೆಪಿ ಸಂಸದರು, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ಎಲ್ಲರೂ ಈ ಹೋರಾಟದಲ್ಲಿ ಇದ್ದವರು ಎಂದರು. ದೆಹಲಿ ಭೇಟಿಯ ಸಮಯದಲ್ಲಿ ಈ ಎಲ್ಲ ವಿಚಾರಗಳ ಕುರಿತು ಸ್ಪಷ್ಟವಾಗಿ ಮಾತುಕತೆ ನಡೆದಿದೆ.

ಇದೇ ವಿಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲು ತೀರ್ಮಾನಿಸಲಾಗಿದೆ. ಈ ವಿಚಾರವನ್ನು ರಾಜಕೀಯಗೊಳಿಸದೆ, ರಾಜ್ಯದ ಹಿತಕ್ಕಾಗಿ ಒಗ್ಗಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹಾಕಬೇಕಿದೆ ಎಂಬುದು ಪಾಟೀಲ್ ಅವರ ನಿಲುವು.

ನಿತ್ಯದ ಅಪ್‌ಡೇಟ್ಸ್‌ಗಾಗಿ ಯಾವಾಗಲೂ Kannada News Today ತಪ್ಪದೆ ವೀಕ್ಷಿಸಿ.

Second Airport for Bengaluru, Minister MB Patil Holds Talks in Delhi

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories