WhatsAppಗೆ ಪ್ರತಿಸ್ಪರ್ಧಿಯಾಗಿ Arattai ಬಂತು, ಇನ್ನು ವಾಟ್ಸಾಪ್ ಕತೆ ಮುಗೀತು
ವಿಶ್ವದಾದ್ಯಂತ ಬಳಕೆಯಲ್ಲಿರುವ ವಾಟ್ಸಾಪ್‌ಗಿಂತ, ಭಾರತದಲ್ಲಿ ತಯಾರಾದ ಅರಟ್ಟೈ ಆಪ್ ಕೆಲವು ಹೊಸ ಫೀಚರ್‌ಗಳು, ಡೇಟಾ ಭದ್ರತೆ, ಜಾಹೀರಾತು ರಹಿತ ಸೇವೆಯಿಂದ ಜನಪ್ರಿಯತೆ ಗಳಿಸುತ್ತಿದೆ. ಹೋಲಿಕೆಯ ವಿವರ ಇಲ್ಲಿದೆ.

Arattai vs WhatsApp: ವಿಶ್ವದಾದ್ಯಂತ ವಾಟ್ಸಾಪ್ ಕೋಟ್ಯಂತರ ಬಳಕೆದಾರರನ್ನು ಹೊಂದಿದ್ದರೂ, ಭಾರತದಲ್ಲಿ ತಯಾರಾದ ಅರಟ್ಟೈ ಆಪ್ ಸ್ವಲ್ಪ ಸಮಯದಲ್ಲೇ ಲಕ್ಷಾಂತರ ಡೌನ್‌ಲೋಡ್‌ಗಳನ್ನು ದಾಖಲಿಸಿದೆ. ವಿಶೇಷವಾಗಿ ಜಾಹೀರಾತು ರಹಿತ ಸಂದೇಶ ಸೇವೆ ಮತ್ತು ಗೋಪ್ಯತೆಗೆ ಹೆಚ್ಚಿನ ಆದ್ಯತೆ ನೀಡಿರುವುದು ಬಳಕೆದಾರರಲ್ಲಿ ವಿಶ್ವಾಸ ಮೂಡಿಸಿದೆ.
ಜೋಹೋ (Zoho) ಕಂಪನಿಯು ಅಭಿವೃದ್ಧಿಪಡಿಸಿದ ಈ ಮೆಸೇಜಿಂಗ್ ಆಪ್‌ನ್ನು ವಾಟ್ಸಾಪ್‌ಗೆ ಭಾರತೀಯ ಪರ್ಯಾಯ ಎಂದು ಕರೆಯಲಾಗುತ್ತಿದೆ. ಡೇಟಾ ಭದ್ರತೆಯ ವಿಷಯದಲ್ಲಿ ಅರಟ್ಟೈ ಹೆಚ್ಚು ಮುಂಚೂಣಿಯಲ್ಲಿದೆ, ಏಕೆಂದರೆ ಬಳಕೆದಾರರ ಮಾಹಿತಿ ಭಾರತೀಯ ಸರ್ವರ್‌ಗಳಲ್ಲೇ ಸಂಗ್ರಹವಾಗುತ್ತದೆ. ಇದರಿಂದ ಡೇಟಾ ಮೇಲೆ ನಿಯಂತ್ರಣ ಸಂಪೂರ್ಣವಾಗಿ ಬಳಕೆದಾರರ ಕೈಯಲ್ಲಿರುತ್ತದೆ.
ಅರಟ್ಟೈಯ ಇನ್ನೊಂದು ವಿಶೇಷತೆ ಎಂದರೆ ‘ಪಾಕೆಟ್’ ಫೀಚರ್. ಇದರಲ್ಲಿ ಪ್ರಮುಖ ಸಂದೇಶಗಳು, ಫೋಟೋಗಳು, ಲಿಂಕ್‌ಗಳು ಮತ್ತು ರಿಮೈಂಡರ್‌ಗಳನ್ನು ಪ್ರತ್ಯೇಕ ಖಾಸಗಿ ಸ್ಥಳದಲ್ಲಿ ಸಂಗ್ರಹಿಸಿಕೊಳ್ಳಬಹುದು. ವಾಟ್ಸಾಪ್‌ನಲ್ಲಿ ಸಾಮಾನ್ಯವಾಗಿ ನಾವು ಸ್ವತಃ ನಮಗೆ ಮೆಸೇಜ್ ಕಳುಹಿಸುವ ಸಂದರ್ಭಗಳಿಗೆ ಇದು ಪರಿಹಾರವಾಗುತ್ತದೆ.
ಅದೇ ರೀತಿಯಲ್ಲಿ, ಮಲ್ಟಿ-ಡಿವೈಸ್ ಸಪೋರ್ಟ್ ಮೂಲಕ ಆಂಡ್ರಾಯ್ಡ್, ಐಒಎಸ್, ವಿಂಡೋಸ್, ಮ್ಯಾಕ್‌ಒಎಸ್, ಲೈನಕ್ಸ್ ಹೀಗೆ ಹಲವು ಸಾಧನಗಳಲ್ಲಿ ಒಂದೇ ಖಾತೆಯನ್ನು ಬಳಸುವ ಅವಕಾಶ ಇದೆ. ವೃತ್ತಿಪರರಿಗೆ ಸೌಲಭ್ಯ ನೀಡಲು ಆಪ್‌ನಲ್ಲಿ ನೇರವಾಗಿ ವೀಡಿಯೋ ಮೀಟಿಂಗ್ ಸೇರಿಕೊಳ್ಳುವ ವ್ಯವಸ್ಥೆಯೂ ಕಲ್ಪಿಸಲಾಗಿದೆ.
ಆದರೂ, ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ನನ್ನು ಸಂಪೂರ್ಣವಾಗಿ ಹಿಂದಿಕ್ಕುವುದು ಅರಟ್ಟೈಗೆ ಕಷ್ಟವೇ ಸರಿ. ಆದರೆ, ಕೇವಲ ಅಲ್ಪಕಾಲದಲ್ಲೇ ಅ್ಯಾಪ್ ಸ್ಟೋರ್‌ನಲ್ಲಿ ಟಾಪ್ ಸ್ಥಾನ ಪಡೆದು, ದಶಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಗಳಿಸಿರುವುದು ಗಮನಾರ್ಹ.
ಭಾರತದಲ್ಲಿ ಗೋಪ್ಯತೆ ಮತ್ತು ಭದ್ರತೆಯನ್ನು ಆದ್ಯತೆ ನೀಡುವ ಬಳಕೆದಾರರಿಗೆ ಅರಟ್ಟೈ ಉತ್ತಮ ಪರ್ಯಾಯ ಎಂಬ ಅಭಿಪ್ರಾಯ ಮೂಡುತ್ತಿದೆ.
Arattai vs WhatsApp, 5 Key Features That Stand Out



