ಶುಗರ್ ನಿಯಂತ್ರಣಕ್ಕೆ ಈ ನೈಸರ್ಗಿಕ ಆಹಾರಗಳು ಸಹಕಾರಿ! ಡಯಾಬಿಟಿಸ್ ಪಕ್ಕ ಕಂಟ್ರೋಲ್ ಆಗುತ್ತೆ
ಮಧುಮೇಹ ನಿಯಂತ್ರಣಕ್ಕೆ ಕಹಿಬೇವು ರಸ, ಮೆಂತೆ ಮೊಳಕೆ, ನಿಂಬೆ ರಸ ಸೇರಿದಂತೆ ಕೆಲವು ನೈಸರ್ಗಿಕ ಆಹಾರ ಪದಾರ್ಥಗಳು ಸಹಾಯಕರಾಗಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಿದ್ದಾರೆ.

Natural Foods That Help Control Sugar: ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಮಸ್ಯೆ ಬಹುತೇಕ ಮನೆಮಾತಾಗಿದ್ದು, ಯುವಕರಲ್ಲಿಯೂ ಹೆಚ್ಚಾಗಿ ಕಾಣಿಸುತ್ತಿದೆ. ಅಸ್ತವ್ಯಸ್ತ ಜೀವನಶೈಲಿ, ಅತಿಯಾದ ಜಂಕ್ ಫುಡ್ ಸೇವನೆ ಹಾಗೂ ವ್ಯಾಯಾಮದ ಕೊರತೆಯಿಂದ ಶುಗರ್ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.
ಆದರೆ ಕೆಲವು ಸರಳ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು ಎಂಬ ಮಾತು ಆರೋಗ್ಯ ತಜ್ಞರಿಂದ ಕೇಳಿಬರುತ್ತಿದೆ.
ವಿಶೇಷವಾಗಿ ನೈಸರ್ಗಿಕ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಇನ್ಸುಲಿನ್ ಕಾರ್ಯಕ್ಷಮತೆ ಉತ್ತಮವಾಗಬಹುದು ಎಂದು ಅವರು ಹೇಳುತ್ತಾರೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಹಿಬೇವು ಅಥವಾ ಹಾಗಲಕಾಯಿ ರಸ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಲು ಸಹಕಾರಿ ಎಂದು ಆಯುರ್ವೇದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಲ್ಲಿ ಬೇರೆ ಪದಾರ್ಥಗಳನ್ನು ಮಿಶ್ರಣ ಮಾಡದೆ ಸೇವಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.
ಇದೇ ರೀತಿ ಮೆಂತೆ ಕಾಳುಗಳನ್ನು ಮೊಳಕೆ ಬರಿಸಿ ಸೇವಿಸುವುದರಿಂದ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ. ಇದು ಶುಗರ್ ನಿಯಂತ್ರಣಕ್ಕೆ ಸಹಕಾರಿ ಎನ್ನಲಾಗುತ್ತಿದೆ. ಹಲವರು ಮೆಂತೆ ನೀರು ಸೇವಿಸುತ್ತಾರೆ, ಆದರೆ ಮೊಳಕೆ ಮಾಡಿದ ಮೆಂತೆ ಹೆಚ್ಚು ಪರಿಣಾಮಕಾರಿ ಎಂದು ತಜ್ಞರು ಸೂಚಿಸುತ್ತಾರೆ.
ಆಹಾರದಲ್ಲಿ ನಿಂಬೆ ರಸ ಬಳಕೆ ಕೂಡ ಮುಖ್ಯವಾಗಿದೆ. ಉಪ್ಪಿನ ಪ್ರಮಾಣ ಕಡಿಮೆ ಮಾಡಿ ಅದರ ಬದಲಿಗೆ ನಿಂಬೆ ರಸವನ್ನು ಬಳಸುವುದರಿಂದ ದೇಹಕ್ಕೆ ವಿಟಮಿನ್ ಸಿ ದೊರೆಯುವುದರ ಜೊತೆಗೆ ಆರೋಗ್ಯಕ್ಕೂ ಲಾಭವಾಗಬಹುದು.
ಅಕ್ಕಿ ಸೇವನೆ ಕಡಿಮೆ ಮಾಡುವುದು ಕೂಡ ಮಧುಮೇಹ ನಿಯಂತ್ರಣಕ್ಕೆ ಸಹಕಾರಿ ಎಂದು ಹೇಳಲಾಗುತ್ತಿದೆ. ಬಿಳಿ ಅಕ್ಕಿ ಮಾತ್ರವಲ್ಲದೆ ಇತರ ವಿಧದ ಅಕ್ಕಿಯ ಬಳಕೆಯನ್ನೂ ಮಿತಿಗೊಳಿಸಿ, ಬದಲಿಗೆ ಸೋಯಾಬೀನ್, ಅಲಸಂದೆ ಹಾಗೂ ಬೇಳೆ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಜೀರಿಗೆ ಪುಡಿ ಕೂಡ ಶುಗರ್ ನಿಯಂತ್ರಣದಲ್ಲಿ ಸಹಾಯ ಮಾಡಬಹುದು ಎಂದು ಆಯುರ್ವೇದ ಪರಿಣಿತರು ಹೇಳುತ್ತಾರೆ. ಇದನ್ನು ಬೆಚ್ಚಗಿನ ನೀರಿನೊಂದಿಗೆ ಅಲ್ಪ ಪ್ರಮಾಣದಲ್ಲಿ ಸೇವಿಸಬಹುದು.
ನೇರಳೆ ಹಣ್ಣು ಮತ್ತು ಸೀಬೆಹಣ್ಣುಗಳಂತಹ ಋತುಮಾನದ ಹಣ್ಣುಗಳು ಕೂಡ ಮಧುಮೇಹಿಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನಿಯಮಿತ ಆಹಾರ ನಿಯಂತ್ರಣ ಹಾಗೂ ವ್ಯಾಯಾಮದ ಜೊತೆಗೆ ಈ ರೀತಿಯ ನೈಸರ್ಗಿಕ ಪದ್ಧತಿಗಳನ್ನು ಅನುಸರಿಸಿದರೆ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಕಾಣಬಹುದು.
ಆದರೆ ಯಾವುದೇ ಆರೋಗ್ಯ ಸಮಸ್ಯೆಗೆ ಸ್ವಯಂ ಚಿಕಿತ್ಸೆ ಮಾಡದೇ, ವೈದ್ಯರ ಸಲಹೆಯೊಂದಿಗೆ ಮಾತ್ರ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವುದು ಅತ್ಯಂತ ಮುಖ್ಯ ಎಂದು ವೈದ್ಯರು ಎಚ್ಚರಿಸಿದ್ದಾರೆ.



