Big News: ಜಮ್ಮು ಕಾಶ್ಮೀರದ ಕತ್ರಾ ಸಮೀಪ ಭೂಕುಸಿತ, 30 ಯಾತ್ರಿಕರ ದುರ್ಮರಣ - Jammu Kashmir Landslide
ವೈಷ್ಣೋ ದೇವಿ ಯಾತ್ರಾಮಾರ್ಗದಲ್ಲಿ ಭಾರೀ ಮಳೆ ಹಿನ್ನೆಲೆ ಭೂಕುಸಿತ ಸಂಭವಿಸಿದೆ. ಬಂಡೆ ಕಲ್ಲುಗಳು ಜಾರಿಬಿದ್ದ ಪರಿಣಾಮ 30 ಮಂದಿ ಯಾತ್ರಿಕರು ಸಾವಿಗೀಡಾಗಿದ್ದಾರೆ. ರಕ್ಷಣಾ ಕಾರ್ಯ ತೀವ್ರಗೊಳಿಸಲಾಗಿದೆ, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

- ಜಮ್ಮು ಕಾಶ್ಮೀರದಲ್ಲಿ ಭೂಕುಸಿತ, 30 ಮಂದಿ ಸಾವು
- ವೈಷ್ಣೋ ದೇವಿ ಮಾರ್ಗದಲ್ಲಿ ಯಾತ್ರಿಕರು ದುರ್ಮರಣ
- ಎನ್‌ಡಿಆರ್‌ಎಫ್, ಸಿಆರ್‌ಪಿಫ್ ತುರ್ತು ರಕ್ಷಣಾ ಕಾರ್ಯಾಚರಣೆ
Jammu Kashmir Landslide : ಜಮ್ಮು ಕಾಶ್ಮೀರದ ಕತ್ರಾ ಸಮೀಪ ಭಾರೀ ಮಳೆಯ ಪರಿಣಾಮ ಭೂಕುಸಿತ ಸಂಭವಿಸಿ ದುರ್ಘಟನೆ ನಡೆದಿದೆ. ಪ್ರಸಿದ್ಧ ವೈಷ್ಣೋ ದೇವಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಬಂಡೆ ಕಲ್ಲುಗಳು ಜಾರಿಬಿದ್ದು, ಕನಿಷ್ಠ 30 ಮಂದಿ ಯಾತ್ರಿಕರು ಸಾವಿಗೀಡಾಗಿದ್ದಾರೆ. ಇನ್ನೂ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಅರ್ಥ್‌ಕುವಾರಿ ಪ್ರದೇಶದ ಇಂದ್ರಪ್ರಸ್ಥ ಭೋಜನಾಲಯದ ಬಳಿ ನಡೆದಿದೆ. ಅಲ್ಲಿ ಪರ್ವತದಿಂದ ಜಾರಿಬಿದ್ದ ಬಂಡೆಗಳು ಯಾತ್ರಿಕರನ್ನು ನುಚ್ಚುನೂರಾಗಿಸಿದವು. ಈ ಬಗ್ಗೆ ರಿಯಾಸಿ ಜಿಲ್ಲೆಯ ಎಸ್‌ಪಿ ಪರಮವೀರ್ ಸಿಂಗ್ ದೃಢಪಡಿಸಿದ್ದಾರೆ.
ಅಪಘಾತದ ಮಾಹಿತಿ ಸಿಕ್ಕ ತಕ್ಷಣ ಎನ್‌ಡಿಆರ್‌ಎಫ್ (NDRF) ಹಾಗೂ ಸಿಆರ್‌ಪಿಫ್ (CRPF) ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. 6ನೇ ಬ್ಯಾಟಾಲಿಯನ್‌ನ ಸೈನಿಕರು ಕೂಡ ಸ್ಥಳದಲ್ಲೇ ಪ್ರಾಥಮಿಕ ಸಹಾಯ ಒದಗಿಸಿ, ಗಾಯಾಳುಗಳನ್ನು ಸಮೀಪದ ಕತ್ರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಈ ಭೀಕರ ಘಟನೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ದುಃಖ ವ್ಯಕ್ತಪಡಿಸಿ, “ಇದು ಅತೀವ ವಿಷಾದನೀಯ ಘಟನೆ” ಎಂದಿದ್ದಾರೆ. ಜೊತೆಗೆ ಜಮ್ಮು ಕಾಶ್ಮೀರದ ಸಿಎಂ ಓಮರ್ ಅಬ್ದುಲ್ಲಾ ಹಾಗೂ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುವ ಭರವಸೆ ನೀಡಿದ್ದಾರೆ.
ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದ್ದು, ಮಣ್ಣು ಮತ್ತು ಕಲ್ಲುಗಳಡಿ ಸಿಲುಕಿಕೊಂಡಿರುವವರನ್ನು ಪತ್ತೆಹಚ್ಚಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
30 Dead in Jammu Kashmir Landslide Near Vaishno Devi Route



