ಪಾದಚಾರಿಗಳ ಮೇಲೆ ಬಸ್ ಹರಿದು ಇಬ್ಬರು ಸಾವು, ಸ್ಥಳೀಯರಿಂದ ಬಸ್‌ಗೆ ಬೆಂಕಿ

ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ಡಿಟಿಸಿ ಬಸ್ ಪಾದಚಾರಿಗಳ ಮೇಲೆ ಹರಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಘಟನೆ ಬಳಿಕ ಆಕ್ರೋಶಗೊಂಡ ಸ್ಥಳೀಯರು ಬಸ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಆತಂಕ ಸೃಷ್ಟಿಸಿದೆ.

ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್‌ (DTC)ಗೆ ಸೇರಿದ ಬಸ್ ವೇಗವಾಗಿ ಬಂದು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಈ ದುರಂತ ಸಂಭವಿಸಿದೆ.

ಅಪಘಾತದ ವೇಳೆ ಬಸ್ ಮೊದಲು ಸ್ಕೂಟಿಯಲ್ಲಿ ಸಾಗುತ್ತಿದ್ದ ಯುವಕನಿಗೆ ಡಿಕ್ಕಿ ಹೊಡೆದು ನಂತರ ಇ-ರಿಕ್ಷಾ ಚಾಲಕ ಸೇರಿದಂತೆ ಇನ್ನೂ ಕೆಲವರನ್ನು ತಾಕಿದೆ. ಸ್ಕೂಟಿಯ ಮೇಲೆ ಇದ್ದ ಯುವಕನ ಮೇಲೆ ಬಸ್ ಚಕ್ರ ಹರಿದ ಪರಿಣಾಮ ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ವ್ಯಕ್ತಿ ಕೂಡ ಗಂಭೀರವಾಗಿ ಗಾಯಗೊಂಡು ನಂತರ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಕ್ರೋಶಗೊಂಡ ಸ್ಥಳೀಯರು

ಈ ಘಟನೆ ಬಳಿಕ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಪಘಾತಕ್ಕೆ ಕಾರಣವಾದ ಬಸ್‌ನ ಗಾಜುಗಳನ್ನು ಒಡೆದು ಹಾಕಿ, ಅದಕ್ಕೆ ಬೆಂಕಿ ಹಚ್ಚಲು ಯತ್ನಿಸಿದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದರು.

ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದು ಗಂಟೆ ಕಾಲ ಶ್ರಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ಸಮಾಧಾನಪಡಿಸಿ ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸಿದರು.

ಗಾಯಾಳುಗಳಿಗೆ ಚಿಕಿತ್ಸೆ, ತನಿಖೆ ಆರಂಭ

ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ ಇಬ್ಬರ ಮೃತದೇಹಗಳನ್ನು ಪೊಲೀಸರು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿಟಿಸಿ ಬಸ್‌ಗಳಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವರದಿಗಳ ಪ್ರಕಾರ 2024-25ರಲ್ಲಿ ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆಗೆ ಸಂಬಂಧಿಸಿದ ಸುಮಾರು 150 ಅಪಘಾತಗಳು ನಡೆದಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

Related Stories