ಪೆಟ್ರೋಲ್ ಹಾಕಿಸಿದ ಹಣ ಕೊಡದೆ ಸಿಬ್ಬಂದಿಯನ್ನು ಎಳೆದೊಯ್ದ ಕಾರು ಚಾಲಕ! ಬಂಕ್ ಸಿಬ್ಬಂದಿ ಸಾವು
ಮಧ್ಯಪ್ರದೇಶದ ಇಂಡೋರ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಂಡ ಬಳಿಕ ಹಣ ಕೊಡದೆ ಕಾರು ಓಡಿಸಿದ ವ್ಯಕ್ತಿ ಬಂಕ್ ಸಿಬ್ಬಂದಿಯನ್ನು ಕೆಲದೂರ ಎಳೆದೊಯ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮಧ್ಯಪ್ರದೇಶದ (Madhya Pradesh) ಇಂಡೋರ್‌ನಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಪೆಟ್ರೋಲ್ ತುಂಬಿಸಿಕೊಂಡ ಬಳಿಕ ಹಣ ಪಾವತಿಸದೆ ಕಾರು ಓಡಿಸಿದ ವ್ಯಕ್ತಿ, ತಡೆಯಲು ಯತ್ನಿಸಿದ ಬಂಕ್ ಸಿಬ್ಬಂದಿಯನ್ನು (Petrol Pump Worker) ಕಾರಿನಿಂದ ಎಳೆದುಕೊಂಡು ಹೋಗಿದ್ದು, ಇದರಿಂದ 22 ವರ್ಷದ ಯುವಕ ಸಾವನ್ನಪ್ಪಿದ್ದಾನೆ.
ಸಾನ್ವರ್ ಪ್ರದೇಶದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಬುಧವಾರ ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಕಾರಿನಲ್ಲಿ ಬಂದಿದ್ದ ಕೆಲವರು ₹4,000 ಮೌಲ್ಯದ ಪೆಟ್ರೋಲ್ ತುಂಬಿಸಿಕೊಂಡು ಬಳಿಕ ಹಣ ನೀಡದೆ ಹೊರಟಿದ್ದಾರೆ.
ತಡೆಯಲು ಹೋದಾಗ ಕಾರಿನಿಂದ ಎಳೆದುಕೊಂಡು ಹೋದ ಚಾಲಕ
ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ಪರ್ಮಾರ್ ಎಂಬ ಯುವಕ ಕಾರು ಹೊರಟಾಗ ತಡೆಯಲು ಪ್ರಯತ್ನಿಸಿದ್ದಾನೆ. ಕಾರಿನ ಕಿಟಕಿಯ ಮೂಲಕ ಕೈ ಹಾಕಿ ಹಣ ಕೇಳಿದಾಗ ಚಾಲಕ ಆತನ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದಾನೆ.
ಆ ಬಳಿಕ ಕಾರಿನ ಕಿಟಕಿಯನ್ನು ಮುಚ್ಚಿ ವೇಗವಾಗಿ ವಾಹನ ಚಲಾಯಿಸಿದ್ದಾನೆ. ಇದರಿಂದ ರೋಹಿತ್ ಕೆಲವು ದೂರ ರಸ್ತೆ ಮೇಲೆ ಎಳೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದಾನೆ.
ಆಸ್ಪತ್ರೆಯಲ್ಲಿ ಮೃತಪಟ್ಟ ಯುವಕ
ಘಟನೆಯ ನಂತರ ಸ್ಥಳೀಯರು ತಕ್ಷಣ ಗಾಯಗೊಂಡ ರೋಹಿತ್‌ರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆ ತಿಳಿದ ಬಳಿಕ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಪೆಟ್ರೋಲ್ ಬಂಕ್‌ನಲ್ಲಿ ಸುರಕ್ಷತಾ ವ್ಯವಸ್ಥೆ ಬಲಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಆರೋಪಿಗಳಿಗಾಗಿ ಪೊಲೀಸರ ಶೋಧ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರು ಉಜ್ಜಯಿನಿ ದಿಕ್ಕಿಗೆ ಹೋಗಿರುವ ಮಾಹಿತಿ ದೊರೆತಿದೆ.
ಆ ಮಾರ್ಗದಲ್ಲಿರುವ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆದರೆ ಕಾರಿನ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸದ ಕಾರಣ ಆರೋಪಿಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.



