ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ನಾಲ್ವರು ವಿದ್ಯಾರ್ಥಿಗಳು ಸಾವು

ಉತ್ತರ ಪ್ರದೇಶದ ಮಥುರಾದಲ್ಲಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಐವರು ವಿದ್ಯಾರ್ಥಿಗಳು ವಿಷವಾಯುವಿಗೆ ಸಿಲುಕಿದ್ದು, ನಾಲ್ವರು ಮೃತಪಟ್ಟರೆ ಮತ್ತೊಬ್ಬ ವಿದ್ಯಾರ್ಥಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

  • ಮಥುರಾದಲ್ಲಿ ನೀರಿನ ಟ್ಯಾಂಕ್‌ನಲ್ಲಿ ವಿಷವಾಯು ಸೋರಿಕೆ
  • ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ನಾಲ್ವರು ವಿದ್ಯಾರ್ಥಿಗಳ ಸಾವು
  • ಘಟನೆಯ ಕುರಿತು ಪೊಲೀಸರು ತನಿಖೆ ಆರಂಭ

ಉತ್ತರ ಪ್ರದೇಶದ (Uttar Pradesh) ಮಥುರಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬೃಂದಾವನದ ಚೈತನ್ಯ ವಿಹಾರ್ ಪ್ರದೇಶದಲ್ಲಿರುವ ಗುರುಕುಲ ಶಾಲೆಯ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಐವರು ವಿದ್ಯಾರ್ಥಿಗಳು ವಿಷವಾಯುವಿಗೆ (Toxic Gas) ಸಿಲುಕಿದ್ದಾರೆ. ಈ ಪೈಕಿ ನಾಲ್ವರು ಮೃತಪಟ್ಟಿದ್ದು, ಮತ್ತೊಬ್ಬ ವಿದ್ಯಾರ್ಥಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಗುರುಕುಲದ ನೀರಿನ ಟ್ಯಾಂಕ್‌ನಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ಸ್ವಚ್ಛಗೊಳಿಸಲು ವಿದ್ಯಾರ್ಥಿಗಳು ಮುಂದಾಗಿದ್ದರು. ಸುಮಾರು 12 ಅಡಿ ಆಳವಿದ್ದ ಟ್ಯಾಂಕ್‌ನ ನೀರನ್ನು ಮೊದಲು ಮೋಟಾರ್ ಮೂಲಕ ಹೊರಗೆ ತೆಗೆಯಲಾಗಿತ್ತು. ಬಳಿಕ ಓರ್ವ ವಿದ್ಯಾರ್ಥಿ ಟ್ಯಾಂಕ್‌ನೊಳಗೆ ಇಳಿದಿದ್ದಾನೆ. ಆತ ಹೊರಗೆ ಬಾರದಿದ್ದಾಗ ಆತನನ್ನು ರಕ್ಷಿಸಲು ಮತ್ತೂ ನಾಲ್ವರು ವಿದ್ಯಾರ್ಥಿಗಳು ಒಬ್ಬರ ಹಿಂದೆ ಒಬ್ಬರು ಟ್ಯಾಂಕ್‌ಗೆ ಇಳಿದಿದ್ದಾರೆ.

ಇದನ್ನೂ ಓದಿ: ಭೀಕರ ಅಪಘಾತ; ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ, ಮೂವರು ಟೆನಿಸ್ ಆಟಗಾರರು ಸಾವು

ಆದರೆ ಐವರೂ ಹೊರಗೆ ಬಾರದಿದ್ದರಿಂದ ಗುರುಕುಲದಲ್ಲಿದ್ದ ಇತರ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ. ಕೂಡಲೇ ಅವರನ್ನು ಟ್ಯಾಂಕ್‌ನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿರುವುದನ್ನು ದೃಢಪಡಿಸಿದ್ದು, ಉಳಿದ ಓರ್ವ ವಿದ್ಯಾರ್ಥಿಗೆ ಚಿಕಿತ್ಸೆ ಮುಂದುವರಿದಿದೆ.

ಮೃತರನ್ನು ಮಧ್ಯಪ್ರದೇಶದ ಜಬಲ್‌ಪುರದ 20 ವರ್ಷದ ಮನು ಕಟಾರೆ, ವಿದಿಶಾದ 17 ವರ್ಷದ ದೇವಾಂಶ್ ಶರ್ಮಾ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ 17 ವರ್ಷದ ಆರ್ಯನ್ ಪಾಂಡೆ ಹಾಗೂ ಮೀರತ್‌ನ 18 ವರ್ಷದ ವಿಷು ಶರ್ಮಾ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಟಿವಿ ವಿಚಾರಕ್ಕೆ ಜಗಳ: ಮಗಳನ್ನೇ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಂದ ತಂದೆ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ವರು ವಿದ್ಯಾರ್ಥಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ (Postmortem) ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಕುಟುಂಬಸ್ಥರಿಗೂ ಮಾಹಿತಿ ನೀಡಲಾಗಿದೆ.

ನೀರಿನ ಟ್ಯಾಂಕ್‌ನಲ್ಲಿ ವಿಷವಾಯು ಹೇಗೆ ಉತ್ಪತ್ತಿಯಾಯಿತು ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿತ್ತೇ ಎಂಬುದರ ಬಗ್ಗೆ ಪೊಲೀಸರು (Police Investigation) ತನಿಖೆ ನಡೆಸುತ್ತಿದ್ದಾರೆ. ಗುರುಕುಲದ ನಿರ್ವಹಣೆಯ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಸಂತಾಪ ವ್ಯಕ್ತಪಡಿಸಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories