ರೈತರೇ, ಈ ಗುರುತಿನ ಚೀಟಿ ಇಲ್ಲದಿದ್ರೆ ಪಿಎಂ ಕಿಸಾನ್ ಸೇರಿದಂತೆ ಸಿಗಲ್ಲ ಸರ್ಕಾರಿ ಯೋಜನೆಗಳ ಲಾಭ
ಸರ್ಕಾರದ ವಿವಿಧ ಕೃಷಿ ಯೋಜನೆಗಳ ಸೌಲಭ್ಯ ಪಡೆಯಲು ರೈತರು ಫಾರ್ಮರ್ ಐಡಿ ನೋಂದಣಿ ಮಾಡಿಸಿಕೊಳ್ಳಬೇಕು, ಅಗತ್ಯ ದಾಖಲೆಗಳೊಂದಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಗುರುತಿನ ಸಂಖ್ಯೆ ಪಡೆಯಬಹುದು.

ಬೆಂಗಳೂರು (Bengaluru): ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಈ ಯೋಜನೆಗಳ ಪ್ರಯೋಜನ ಅರ್ಹ ರೈತರಿಗೆ ನೇರವಾಗಿ ತಲುಪಿಸಲು ರೈತರ ಗುರುತಿನ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಹೀಗಾಗಿ ಇನ್ನೂ ನೋಂದಣಿ ಮಾಡಿಸಿಕೊಳ್ಳದ ರೈತರು ಆದಷ್ಟು ಬೇಗ ಫಾರ್ಮರ್ ಐಡಿ (Farmer ID) ಪಡೆಯುವಂತೆ ಕೃಷಿ ಇಲಾಖೆ ಸೂಚಿಸಿದೆ.
ರೈತರ ಮಾಹಿತಿಯನ್ನು ಒಂದೇ ವ್ಯವಸ್ಥೆಯಲ್ಲಿ ಸಂಗ್ರಹಿಸುವ ಉದ್ದೇಶದಿಂದ ಪ್ರತಿಯೊಬ್ಬ ರೈತರಿಗೆ ಪ್ರತ್ಯೇಕ ಗುರುತಿನ ಸಂಖ್ಯೆ ನೀಡಲಾಗುತ್ತಿದೆ. ಈ ಗುರುತಿನ ಸಂಖ್ಯೆಯನ್ನು ಎಫ್‌ಐಡಿ (FID) ಎಂದು ಕರೆಯಲಾಗುತ್ತದೆ. ರೈತರ ಆಧಾರ್, ಜಮೀನಿನ ದಾಖಲೆ, ಬ್ಯಾಂಕ್ ಖಾತೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಡಿಜಿಟಲ್ ವ್ಯವಸ್ಥೆಯೊಂದಿಗೆ ಸಂಪರ್ಕಿಸಲಾಗುತ್ತದೆ.
ಮುಂದಿನ ದಿನಗಳಲ್ಲಿ ಜಾರಿಯಾಗುವ ಹಲವು ಹೊಸ ಕೃಷಿ ಯೋಜನೆಗಳಿಗೂ (Agriculture Schemes) ಈ ಗುರುತಿನ ಸಂಖ್ಯೆ ಅಗತ್ಯವಾಗುವ ಸಾಧ್ಯತೆ ಇರುವುದರಿಂದ ರೈತರು ನೋಂದಣಿ ಪ್ರಕ್ರಿಯೆಯನ್ನು ವಿಳಂಬ ಮಾಡಬಾರದು ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಕರ್ನಾಟಕ ರೈತರಿಗೆ ಸಿಹಿಸುದ್ದಿ! ನೇಗಿಲ ಯೋಗಿ ಯೋಜನೆಯಡಿ ಆ್ಯಪ್ ಸೇವೆ, ಹಲವು ಕೃಷಿ ಸೌಲಭ್ಯ
ಯಾವ ಸೌಲಭ್ಯಗಳಿಗೆ ಎಫ್‌ಐಡಿ ಬೇಕು?
ಪಿಎಂ ಕಿಸಾನ್ (PM-KISAN) ಸೇರಿದಂತೆ ವಿವಿಧ ಆರ್ಥಿಕ ನೆರವುಗಳನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲು ಎಫ್‌ಐಡಿ ಪ್ರಮುಖವಾಗಿರುತ್ತದೆ. ಕೃಷಿ ಸಾಲ ಪಡೆಯುವಾಗ ಹಾಗೂ ಬೆಳೆ ವಿಮೆಯ ಸಂದರ್ಭದಲ್ಲಿ ರೈತರ ಅರ್ಹತೆಯನ್ನು ಪರಿಶೀಲಿಸಲು ಕೂಡ ಇದು ನೆರವಾಗುತ್ತದೆ.
ಅದೇ ರೀತಿ ರಿಯಾಯಿತಿ ದರದಲ್ಲಿ ಯೂರಿಯಾ ಮತ್ತು ಇತರೆ ರಸಗೊಬ್ಬರಗಳನ್ನು ಪಡೆಯಲು, ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಪಡೆದುಕೊಳ್ಳಲು ಹಾಗೂ ವಿವಿಧ ಕೃಷಿ ಇಲಾಖೆಯ ಯೋಜನೆಗಳ ಪ್ರಯೋಜನ ಪಡೆಯಲು ಎಫ್‌ಐಡಿ ಅಗತ್ಯವಾಗುತ್ತದೆ.
ಬರ ಅಥವಾ ಪ್ರವಾಹದಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ಸರ್ಕಾರದಿಂದ ನೀಡುವ ಪರಿಹಾರ ಧನ ಪಡೆಯಲು ಮತ್ತು ಬೆಂಬಲ ಬೆಲೆ (MSP) ಯೋಜನೆಯಡಿ ಪ್ರಯೋಜನ ಪಡೆಯಲು ಕೂಡ ರೈತರ ಗುರುತಿನ ಸಂಖ್ಯೆ ಪ್ರಮುಖವಾಗಲಿದೆ.
ಇದನ್ನೂ ಓದಿ: ಕರ್ನಾಟಕ ಮಳೆ ಅಲರ್ಟ್! ಇಂದು ಮತ್ತು ನಾಳೆ ಬೆಂಗಳೂರು ಸೇರಿ 3 ಜಿಲ್ಲೆಗಳಲ್ಲಿ ಪ್ರಚಂಡ ಮಳೆ
ನೋಂದಣಿಗೆ ಯಾವ ದಾಖಲೆ ಬೇಕು?
ಎಫ್‌ಐಡಿ ಪಡೆಯಲು ರೈತರು ತಮ್ಮ ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು. ಈ ವೇಳೆ ಆಧಾರ್ ಕಾರ್ಡ್, ಜಮೀನಿನ ವಿವರಗಳಿರುವ ಪಹಣಿ ಪತ್ರ (RTC), ಬ್ಯಾಂಕ್ ಪಾಸ್‌ಬುಕ್ ಪ್ರತಿ ಹಾಗೂ ಅಗತ್ಯವಿದ್ದಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ರೈತರಿಗೆ ಜಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕು.
ಇದರ ಜೊತೆಗೆ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯನ್ನೂ ನೀಡಬೇಕಾಗುತ್ತದೆ. ದಾಖಲೆಗಳ ಪರಿಶೀಲನೆ ಬಳಿಕ ರೈತರ ಮಾಹಿತಿಯನ್ನು ನೋಂದಣಿ ಮಾಡಿ ಪ್ರತ್ಯೇಕ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ಮಾತ್ರವಲ್ಲದೆ ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಹಾಗೂ ಪಶುಸಂಗೋಪನೆ ಸೇರಿದಂತೆ ಕೃಷಿ ಸಂಬಂಧಿತ ಇಲಾಖೆಗಳ ಯೋಜನೆಗಳ ಪ್ರಯೋಜನ ಪಡೆಯಲು ಈ ಡಿಜಿಟಲ್ ಗುರುತಿನ ವ್ಯವಸ್ಥೆ ಸಹಾಯಕವಾಗಲಿದೆ. ಆದ್ದರಿಂದ ಅರ್ಹ ರೈತರು ಎಫ್‌ಐಡಿ ನೋಂದಣಿಯನ್ನು ಪೂರ್ಣಗೊಳಿಸಿಕೊಳ್ಳುವುದು ಉತ್ತಮ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.




