ಕರ್ನಾಟಕ ಜಿಲ್ಲಾ, ತಾಲ್ಲೂಕು ಪಂಚಾಯತಿ ಚುನಾವಣೆ: ಮಹಿಳೆಯರಿಗೆ ಶೇ.50ಕ್ಕೂ ಹೆಚ್ಚು ಮೀಸಲಾತಿ

Karnataka Elections: ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಸ್ಥಾನಗಳಿಗೆ ವರ್ಗವಾರು ಮೀಸಲಾತಿ ಪ್ರಕಟವಾಗಿದ್ದು, ಮಹಿಳೆಯರಿಗೆ ಶೇ.50ಕ್ಕೂ ಹೆಚ್ಚು ಸ್ಥಾನಗಳು ಮೀಸಲಾಗಿರುವುದರಿಂದ ಚುನಾವಣೆ ಪ್ರಕ್ರಿಯೆಗೆ ವೇಗ ಸಿಗುವ ನಿರೀಕ್ಷೆಯಿದೆ.

Karnataka Elections: ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಹತ್ವದ ಬೆಳವಣಿಗೆ ನಡೆದಿದ್ದು, ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಸದಸ್ಯ ಸ್ಥಾನಗಳ ಮೀಸಲಾತಿ (Reservation) ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ.

ಅಕ್ಟೋಬರ್ 7ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಹೊಸ ಮೀಸಲಾತಿ ಆದೇಶದಂತೆ ಜಿಲ್ಲಾ ಪಂಚಾಯತಿಯ (Zilla Panchayat) ಒಟ್ಟು 1,129 ಸ್ಥಾನಗಳ ಪೈಕಿ 571 ಸ್ಥಾನಗಳನ್ನು ಮಹಿಳೆಯರಿಗೆ ಕಾಯ್ದಿರಿಸಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಗೆ 225, ಪರಿಶಿಷ್ಟ ಪಂಗಡಕ್ಕೆ 102, ಹಿಂದುಳಿದ ವರ್ಗ ‘ಅ’ಗೆ 183, ಹಿಂದುಳಿದ ವರ್ಗ ‘ಬ’ಗೆ 43 ಹಾಗೂ ಸಾಮಾನ್ಯ ವರ್ಗಕ್ಕೆ 576 ಸ್ಥಾನಗಳು ಸೇರಿವೆ.

ಇದನ್ನೂ ಓದಿ: ಗ್ರಾಮ ಪಂಚಾಯತಿ ಚುನಾವಣೆ ಯಾವಾಗ? ದಿನಾಂಕದ ಸುಳಿವು ಕೊಟ್ಟ ಸರ್ಕಾರ

ಇದೇ ವೇಳೆ ತಾಲ್ಲೂಕು ಪಂಚಾಯತಿಗಳ (Taluk Panchayat) ಒಟ್ಟು 3,656 ಸದಸ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ಈ ಪೈಕಿ 1,905 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದು, ಒಟ್ಟು ಸ್ಥಾನಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಪಾಲು ಮಹಿಳೆಯರಿಗೆ ದೊರೆತಿದೆ.

ತಾಲ್ಲೂಕು ಪಂಚಾಯತಿಯಲ್ಲಿ ಪರಿಶಿಷ್ಟ ಜಾತಿಗೆ 733, ಪರಿಶಿಷ್ಟ ಪಂಗಡಕ್ಕೆ 394, ಹಿಂದುಳಿದ ವರ್ಗ ‘ಅ’ಗೆ 508, ಹಿಂದುಳಿದ ವರ್ಗ ‘ಬ’ಗೆ 111 ಹಾಗೂ ಸಾಮಾನ್ಯ ವರ್ಗಕ್ಕೆ 1,910 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಈ ಪೈಕಿ ಕ್ರಮವಾಗಿ 429, 287, 306, 64 ಮತ್ತು 819 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಸೆಕ್ಷನ್ 123ರ ಅಡಿಯಲ್ಲಿ ತಾಲ್ಲೂಕು ಪಂಚಾಯತಿ ಹಾಗೂ ಸೆಕ್ಷನ್ 62ರ ಅಡಿಯಲ್ಲಿ ಜಿಲ್ಲಾ ಪಂಚಾಯತಿ ಮೀಸಲಾತಿ ನಿಗದಿಪಡಿಸಲಾಗಿದೆ. ಈ ಹಿಂದೆ ಹೊರಡಿಸಿದ್ದ ಸಂಬಂಧಿತ ಅಧಿಸೂಚನೆಗಳನ್ನು ರದ್ದುಗೊಳಿಸಿ ಹೊಸ ಮೀಸಲಾತಿ ಆದೇಶವನ್ನು ಸರ್ಕಾರ ಹೊರಡಿಸಿದೆ.

ಇದನ್ನೂ ಓದಿ: ಜಿಪಂ, ತಾಪಂ ಮೀಸಲು ಕರಡು ಅಧಿಸೂಚನೆ ನಾಳೆಯೇ ಪ್ರಕಟ: ಈಶ್ವರ ಖಂಡ್ರೆ

ರಾಜ್ಯಪಾಲರ ಆಜ್ಞಾನುಸಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಕೆ.ಹೆಚ್. ಅವರು ಅಧಿಸೂಚನೆಗಳಿಗೆ ಅಂಕಿತ ಹಾಕಿದ್ದಾರೆ.

ಮೀಸಲಾತಿ ಪಟ್ಟಿ ಪ್ರಕಟವಾಗಿರುವುದರಿಂದ ಇದೀಗ ರಾಜ್ಯ ಚುನಾವಣಾ ಆಯೋಗ (State Election Commission) ಮುಂದಿನ ಹಂತದ ಚುನಾವಣಾ ಪ್ರಕ್ರಿಯೆ ಆರಂಭಿಸಲು ಅವಕಾಶ ಸಿಕ್ಕಂತಾಗಿದೆ. ಹೀಗಾಗಿ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯ ವೇಳಾಪಟ್ಟಿ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆ ಹೆಚ್ಚಾಗಿದೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories