ರೇಣುಕಾಸ್ವಾಮಿ ಕೇಸ್ನಲ್ಲಿ ಬಿಗ್ ಟ್ವಿಸ್ಟ್: ಪೊಲೀಸರ ವಿರುದ್ಧವೇ ಇಲಾಖಾ ತನಿಖೆಗೆ ಸೂಚನೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಿರುವ ಬೆನ್ನಲ್ಲೇ ತನಿಖಾಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಸೂಚಿಸಲಾಗಿದೆ. ಪಿಎಸ್‌ಐ ವಿನಯ್ ಪಾತ್ರದ ಬಗ್ಗೆಯೂ ಆರೋಪಗಳು ಕೇಳಿಬಂದಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಬೆಂಗಳೂರು (Bengaluru): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಹೊಸ ಬೆಳವಣಿಗೆಗಳು ಕಂಡುಬಂದಿವೆ. ಆರೋಪಿ ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿರುವ ಬೆನ್ನಲ್ಲೇ, ಪ್ರಕರಣದ ತನಿಖೆಯಲ್ಲಿ ಲೋಪಗಳಾಗಿವೆ ಎಂಬ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪಿಎಸ್‌ಐ ವಿನಯ್ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಪ್ರಕರಣದ ತನಿಖೆಯಲ್ಲಿ ಸಾಕ್ಷಿಗಳನ್ನು ಸೃಷ್ಟಿಸಲಾಗಿದೆ ಹಾಗೂ ಪಿಎಸ್‌ಐ ವಿನಯ್ ಅವರನ್ನು ಆರೋಪಿಗಳ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಈ ಆರೋಪಗಳ ಕುರಿತು ಇಲಾಖಾ ಮಟ್ಟದಲ್ಲಿ ಪರಿಶೀಲನೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲ, ಅದನ್ನ ಬಿಟ್ಟು ಹನಿಟ್ರ್ಯಾಪ್, ಸ್ಟಿಂಗ್ ಆಪರೇಷನ್ ಚರ್ಚೆ ಬೇಕಾ?: ಈಶ್ವರಪ್ಪ
ರೇಣುಕಾಸ್ವಾಮಿ ಮೃತದೇಹವನ್ನು ವಿಲೇವಾರಿ ಮಾಡುವಲ್ಲಿ ಪಿಎಸ್‌ಐ ವಿನಯ್ ಅವರ ಅಣತಿಯಂತೆ ಆರೋಪಿಗಳು ನಡೆದುಕೊಂಡಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಹೀಗಾಗಿ, ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಈ ಸಂಬಂಧ ಸ್ನೇಹಮಯಿ ಕೃಷ್ಣ ಅವರು ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕರಾದ (DG & IG) ಡಾ. ಎಂ. ಸಲೀಂ ಅವರಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ತನಿಖಾಧಿಕಾರಿ ಎಸಿಪಿ ಚಂದನ್ ಮತ್ತು ಪಿಎಸ್‌ಐ ವಿನಯ್ ವಿರುದ್ಧ ಇಲಾಖಾ ತನಿಖೆ ನಡೆಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಆತಂಕ ಬೇಡ, ಗೃಹಲಕ್ಷ್ಮಿ ಹಣ ಅರ್ಹ ಮಹಿಳೆಯರಿಗೆ ಸಿಗಲಿದೆ: ಮಧು ಬಂಗಾರಪ್ಪ
ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ಅವರ ನೇತೃತ್ವದಲ್ಲಿ ಈ ತನಿಖೆ ನಡೆಯಲಿದೆ ಎಂದು ವರದಿಯಾಗಿದೆ. ಇಲಾಖಾ ತನಿಖೆಯಲ್ಲಿ ಆರೋಪಗಳ ಸತ್ಯಾಸತ್ಯತೆ ಬಹಿರಂಗವಾಗಬೇಕಿದೆ. ಸದ್ಯ ಕೇಳಿಬಂದಿರುವ ಆರೋಪಗಳು ತನಿಖೆಯ ಮೂಲಕ ದೃಢಪಟ್ಟ ಬಳಿಕವಷ್ಟೇ ಮುಂದಿನ ಕ್ರಮಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



