ಕೆರೆಯಲ್ಲಿ ಮುಳುಗಿ ಈಜಲು ತೆರಳಿದ್ದ ಮೂವರು ಮಕ್ಕಳು ಸಾವು! ಪೋಷಕರ ಆಕ್ರಂದನ

ದಸರಾ ರಜೆ ಹಿನ್ನೆಲೆ ಈಜಲು ತೆರಳಿದ್ದ ಮೂವರು 12 ವರ್ಷದ ಮಕ್ಕಳು ಕೆರೆಯ ಆಳ ಅರಿಯದೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದಲ್ಲಿ ನಡೆದಿದೆ.

  • ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾವು
  • ದಸರಾ ರಜೆಯಲ್ಲಿ ನಡೆದ ದುರಂತ
  • ಚಿಕ್ಕಮಗಳೂರಿನಲ್ಲಿ ಗ್ರಾಮವೇ ಕಣ್ಣೀರು

ಚಿಕ್ಕಮಗಳೂರು (Chikkamagaluru) ತಾಲೂಕಿನ ಮರ್ಲೆ ಗ್ರಾಮದಲ್ಲಿ ದಸರಾ ರಜೆ (Dasara Holiday) ಹಿನ್ನೆಲೆ ಕೆರೆಗೆ ಈಜಲು ತೆರಳಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಒಂದೇ ಗ್ರಾಮದವರಾಗಿದ್ದು, 12 ವರ್ಷದವರಾಗಿದ್ದಾರೆ.

ಮೃತ ಮಕ್ಕಳು ಬೇರೆ ಬೇರೆ ಶಾಲೆಗಳಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದರು. ರಜೆ ಹಿನ್ನೆಲೆಯಲ್ಲಿ ಒಟ್ಟಾಗಿ ಕೆರೆಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಗ್ರಾಮದಲ್ಲಿ ಮಹಿಳೆಯರು ಬಟ್ಟೆ ಹಾಗೂ ಪಾತ್ರೆ ತೊಳೆಯಲು ಬಳಸುವ ಕಟ್ಟೆಗಳ ಸಮೀಪ ಮಕ್ಕಳು ನೀರಿಗೆ ಇಳಿದಿದ್ದರು. ಈ ವೇಳೆ ಆಳದ ಅರಿವಿಲ್ಲದೆ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಕೆರೆಯಲ್ಲಿ ಹೂಳು ತೆರವುಗೊಳಿಸಲಾಗಿದ್ದು, ಇದರಿಂದ ಕೆಲವು ಭಾಗಗಳಲ್ಲಿ ಕೆರೆಯ ಆಳ ಹೆಚ್ಚಾಗಿತ್ತು ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಗ್ರಾಮದ ಜನರು ಕೆರೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಪುಟ್ಟ ಮಕ್ಕಳ ಮೃತದೇಹಗಳನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ದುಃಖದಲ್ಲಿ ಮುಳುಗಿದೆ.

ಮಾಹಿತಿ ಪಡೆದ ಗ್ರಾಮಾಂತರ ಠಾಣೆ (Rural Police Station) ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories