Colors Kannada: ಕಲರ್ಸ್ ಕನ್ನಡ ವೀಕ್ಷಕರಿಗೆ ಸಂಭ್ರಮದ ಸುದ್ದಿ! 3 ದಿನ ಅನುಬಂಧ ಅವಾರ್ಡ್ಸ್ ಹಬ್ಬ
Colors Kannada: ಬಿಗ್ ಬಾಸ್ ನಂತರ ಕಲರ್ಸ್ ಕನ್ನಡ ವೀಕ್ಷಕರಿಗೆ ಸಂಭ್ರಮದ ಸುದ್ದಿ ಸಿಕ್ಕಿದ್ದು, ಜನವರಿ 24ರಿಂದ ಮೂರು ದಿನ ಅನುಬಂಧ ಅವಾರ್ಡ್ಸ್ ಪ್ರಸಾರವಾಗಿ ಕಿರುತೆರೆ ಮತ್ತು ಹಿರಿತೆರೆ ತಾರೆಯರ ಸಂಗಮವಾಗಲಿದೆ.

- ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ಮೂರು ದಿನ ಪ್ರಸಾರ
- ಅನುಬಂಧ ಅವಾರ್ಡ್ಸ್‌ನಲ್ಲಿ 37 ಪ್ರಶಸ್ತಿಗಳು ಮತ್ತು ವಿಶೇಷ ಗೌರವ
- ಕಲರ್ಸ್ ಕನ್ನಡ ವೇದಿಕೆಯಲ್ಲಿ ಕಿರುತೆರೆ–ಹಿರಿತೆರೆ ತಾರೆಯರ ಸಮಾಗಮ
Colors Kannada: ಬಿಗ್ ಬಾಸ್ ಫಿನಾಲೆ ಮುಗಿದ ಬಳಿಕ ವೀಕೆಂಡ್‌ಗಳಲ್ಲಿ ಸುದೀಪ್ ಅವರನ್ನು ನೋಡೋ ಅವಕಾಶ ಇಲ್ಲದಿದ್ದಕ್ಕೆ ಸ್ವಲ್ಪ ಬೇಸರದಲ್ಲಿದ್ದ ಕಲರ್ಸ್ ಕನ್ನಡ ವೀಕ್ಷಕರಿಗೆ ಇದೀಗ ಖುಷಿಯ ಸುದ್ದಿ ಸಿಕ್ಕಿದೆ.
ಇಂದಿನಿಂದ ಜನವರಿ 24, 25 ಮತ್ತು 26ರಂದು ಸಂಜೆ 7 ಗಂಟೆಗೆ 12ನೇ ವರ್ಷದ ‘ಅನುಬಂಧ ಅವಾರ್ಡ್ಸ್’ (Anubandha Awards) ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಮೂರು ದಿನಗಳ ಕಾಲ ಕಿರುತೆರೆ ವೀಕ್ಷಕರಿಗೆ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ.
‘ಅನುಬಂಧ ಅವಾರ್ಡ್ಸ್’ ಎಂದರೆ ಕೇವಲ ಪ್ರಶಸ್ತಿ ಸಮಾರಂಭವಲ್ಲ. ಇದು ವರ್ಷದಿಂದ ವರ್ಷಕ್ಕೆ ಕಲರ್ಸ್ ಕನ್ನಡ ಕುಟುಂಬದ ಒಂದು ಸಂಭ್ರಮದ ಹಬ್ಬವಾಗಿಯೇ ರೂಪುಗೊಂಡಿದೆ.
ವೀಕ್ಷಕರ ಮೆಚ್ಚಿನ ನಟ, ನಟಿ, ಸೊಸೆ, ಅತ್ತೆ, ವಿಲನ್ ಸೇರಿದಂತೆ ಹಲವು ಜನಪ್ರಿಯ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ಈ ಬಾರಿ ಒಟ್ಟು 37 ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, 15ಕ್ಕೂ ಹೆಚ್ಚು ಮನರಂಜನಾ ಪ್ರದರ್ಶನಗಳು ವೇದಿಕೆಯನ್ನು ಮತ್ತಷ್ಟು ರಂಗಿನಗೊಳಿಸಲಿವೆ.

ವಿಶೇಷ ಗೌರವಗಳು ಮತ್ತು ಅತಿಥಿಗಳು
ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಚಿತ್ರರಂಗಕ್ಕೆ ಕಾಲಿಟ್ಟ 50 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ಅದೇ ರೀತಿ ‘ಭಾಗ್ಯ’ ಧಾರಾವಾಹಿಯ ಪಾತ್ರಧಾರಿ ಸುಷ್ಮಾ ರಾವ್ ಅವರು ಕಿರುತೆರೆಯಲ್ಲಿ 25 ವರ್ಷಗಳ ಪಯಣ ಪೂರ್ಣಗೊಳಿಸಿರುವುದಕ್ಕೆ ಗೌರವ ಸ್ವೀಕರಿಸಲಿದ್ದಾರೆ.
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ರಾಮಾಚಾರಿ’ ಸಾವಿರ ಕಂತು ಪೂರೈಸಿರುವ ಸಂಭ್ರಮವನ್ನು ಈ ವೇದಿಕೆಯಲ್ಲಿ ಆಚರಿಸಲಾಗುತ್ತಿದೆ. ಈ ವಿಶೇಷ ಕ್ಷಣಕ್ಕೆ ಕನ್ನಡ ಚಿತ್ರರಂಗದ ‘ರಾಮಾಚಾರಿ’ ಎಂದೇ ಖ್ಯಾತರಾದ ರವಿಚಂದ್ರನ್ ಅವರು ಆಗಮಿಸುವುದು ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿದೆ.
ಸಿನಿಮಾ ಲೋಕದ ಸಂಭ್ರಮವೂ ವೇದಿಕೆಯಲ್ಲಿ
‘ಸು ಫ್ರಮ್ ಸೋ’ ಸಿನಿಮಾ ಥಿಯೇಟರ್ ಬಳಿಕ ಒಟಿಟಿ ಮತ್ತು ಟಿವಿಯಲ್ಲಿ ಪ್ರಸಾರವಾಗಿದ್ದು, ಕಲರ್ಸ್ ಕನ್ನಡದಲ್ಲಿಯೇ ವೀಕ್ಷಕರನ್ನು ಸೆಳೆದಿದೆ. ಈ ಹಿನ್ನೆಲೆ ಚಿತ್ರದ ನಿರ್ದೇಶಕ ಜೆ.ಪಿ. ತುಮಿನಾಡ್ ಮತ್ತು ಕಲಾವಿದರಾದ ಶನೀಲ್ ಗೌತಮ್ ಹಾಗೂ ಪುಷ್ಪರಾಜ್ ಬೋಳಾರ್ ವೇದಿಕೆ ಏರಲಿದ್ದಾರೆ. ಈ ಸಿನಿಮಾಗೆ ಪ್ರಶಸ್ತಿಯೂ ಲಭಿಸುವ ಸಾಧ್ಯತೆ ಇದೆ.
ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರಿಗೆ ಅವರ ತಾಯಿ ವೇದಿಕೆ ಮೇಲೆ ಸರ್‌ಪ್ರೈಸ್ ನೀಡಿರುವುದು ಭಾವನಾತ್ಮಕ ಕ್ಷಣವಾಗಿ ಮೂಡಿಬಂದಿದೆ. ‘ಹುಚ್ಚ’ ಸಿನಿಮಾದ ಖ್ಯಾತಿಯ ನಟಿ ರೇಖಾ ವೇದವ್ಯಾಸ್ ಅವರು ಸುದೀರ್ಘ ಕಾಲದ ನಂತರ ಈ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ವೀಕ್ಷಕರ ಗಮನ ಸೆಳೆಯಲಿದೆ.
ಪುನೀತ್ ಹೆಸರಲ್ಲಿ ವಿಶೇಷ ಪ್ರಶಸ್ತಿ
ಪುನೀತ್ ರಾಜ್‌ಕುಮಾರ್ ಅವರ ಹೆಸರಲ್ಲಿ ನೀಡಲಾಗುವ ‘ಕಲರ್ಸ್ ಕನ್ನಡಿಗ’ ಪ್ರಶಸ್ತಿಯನ್ನು ಈ ಬಾರಿ ಬಾಲ್ಯ ವಿವಾಹದ ವಿರುದ್ಧ ಹೋರಾಟ ನಡೆಸುತ್ತಿರುವ ಬಾಗಲಕೋಟೆಯ ಗಟ್ಟಿಗಿತ್ತಿ ಗುರಮ್ಮ ಸಂಕಿನಮಠ ಅವರಿಗೆ ನೀಡಲಾಗಿದೆ. ಸಮಾಜಮುಖಿ ಚಿಂತನೆಗೆ ಸಲ್ಲಿಸುವ ಈ ಗೌರವಕ್ಕೆ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ.


