Kannada Movie: ‘ಡಿಯರ್ ಹಸ್ಬೆಂಡ್’ಗೆ ಬಾಲಿವುಡ್ ಟಚ್! ಹಾಡುಗಳ ರೆಕಾರ್ಡಿಂಗ್ ಪೂರ್ಣ
Kannada Movie : ‘ಡಿಯರ್ ಹಸ್ಬೆಂಡ್’ ಚಿತ್ರದ ಹಾಡುಗಳ ಧ್ವನಿಮುದ್ರಣ ಪೂರ್ಣಗೊಂಡಿದ್ದು, ಕೊನೆಯ ವಿಶೇಷ ಹಾಡಿಗೆ ಬಾಲಿವುಡ್ ಗಾಯಕ ನಕಾಶ್ ಧ್ವನಿಯಾಗಿರುವುದು ಚಿತ್ರತಂಡದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

Kannada Movie : ಗುರುರಾಜ ಕುಲಕರ್ಣಿ ನಿರ್ದೇಶನದ ‘ಡಿಯರ್ ಹಸ್ಬೆಂಡ್’ ಸಿನಿಮಾ ಹಂತಹಂತವಾಗಿ ತನ್ನ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದು, ಇದೀಗ ಮತ್ತೊಂದು ಮಹತ್ವದ ಹಂತ ತಲುಪಿದೆ. ಚಿತ್ರದ ಎಲ್ಲಾ ಹಾಡುಗಳ ಧ್ವನಿಮುದ್ರಣ ಕಾರ್ಯ ಯಶಸ್ವಿಯಾಗಿ ಮುಗಿದಿದೆ.
ಚಿತ್ರದ ವಿಶೇಷ ಆಕರ್ಷಣೆಯಾಗಿ ಗುರುತಿಸಿಕೊಂಡಿರುವ ಕೊನೆಯ ಹಾಡಿಗೆ ಬಾಲಿವುಡ್‌ನ ಜನಪ್ರಿಯ ಗಾಯಕ ನಕಾಶ್ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಸ್ಟುಡಿಯೋದಲ್ಲಿ ನಡೆದ ರೆಕಾರ್ಡಿಂಗ್‌ನಲ್ಲಿ ಅವರು ಹಾಡಿಗೆ ಜೀವ ತುಂಬಿದ್ದಾರೆ.
ವೀರ್ ಸಮರ್ಥ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. “ಮಾಲಾಶ್ರೀ ಸಿಕ್ಕಳ್ಳೋ ಮೆಲ್ಲನೆ ನಕ್ಕಳ್ಳೋ” ಎಂದು ಆರಂಭವಾಗುವ ಈ ಹಾಡು ಟಪೋರಿ ಶೈಲಿಯಲ್ಲಿ ಮೂಡಿಬಂದಿದ್ದು, ಯುವಜನರನ್ನು ಸೆಳೆಯುವ ಎಲ್ಲ ಅಂಶಗಳನ್ನು ಒಳಗೊಂಡಿದೆ.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಗುರುರಾಜ ಕುಲಕರ್ಣಿ, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡುಗಳ ರೆಕಾರ್ಡಿಂಗ್ ಕೂಡ ಯಶಸ್ವಿಯಾಗಿ ಮುಗಿದಿದೆ ಎಂದು ತಿಳಿಸಿದ್ದಾರೆ. ನಕಾಶ್ ಅವರು ಹಾಡಿನ ಹಿನ್ನೆಲೆ ಮತ್ತು ಅರ್ಥವನ್ನು ತಿಳಿದುಕೊಂಡು ಬಹಳ ಉತ್ಸಾಹದಿಂದ ಹಾಡಿರುವುದಾಗಿ ಹೇಳಿದ್ದಾರೆ.
ರಾತ್ರಿ ಆರಂಭವಾದ ರೆಕಾರ್ಡಿಂಗ್ ಮುಂಜಾನೆವರೆಗೂ ನಡೆದಿದ್ದು, ಈ ಹಾಡು ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ ಎಂಬ ವಿಶ್ವಾಸ ಚಿತ್ರತಂಡದಲ್ಲಿದೆ. ಇದೀಗ ಮುಂದಿನ ಹಂತದ ಚಿತ್ರೀಕರಣಕ್ಕೆ ತಂಡ ಸಿದ್ಧತೆ ನಡೆಸುತ್ತಿದೆ.



