ಗುರುವೈಭವೋತ್ಸವ ವೇದಿಕೆಯಲ್ಲಿ ರಾಘವೇಂದ್ರ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್

ಮಂತ್ರಾಲಯದ ಗುರುವೈಭವೋತ್ಸವ ವೇದಿಕೆಯಲ್ಲಿ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಫ್ಲೋರಿಡಾದ ಯೋಗ ಸಂಸ್ಕೃತಂ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದ್ದು, ರಾಯರ ಅನುಗ್ರಹ ಪ್ರಶಸ್ತಿಯೂ ನೀಡಿ ಸನ್ಮಾನಿಸಲಾಯಿತು.

  • ರಾಘವೇಂದ್ರ ರಾಜ್‌ಕುಮಾರ್ ಗೌರವ ಡಾಕ್ಟರೇಟ್
  • ಗುರುವೈಭವೋತ್ಸವ ವೇದಿಕೆಯಲ್ಲಿ ಪ್ರಶಸ್ತಿ ಗೌರವ
  • ಯೋಗ ಸಂಸ್ಕೃತಂ ವಿಶ್ವವಿದ್ಯಾಲಯದಿಂದ ಮಾನ್ಯತೆ

ಮಂತ್ರಾಲಯದಲ್ಲಿ (Mantralaya) ನಡೆದ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಕ್ಷಣ ಸಾಕ್ಷಿಯಾಯಿತು. ಕನ್ನಡ ಚಿತ್ರರಂಗದ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಅವರಿಗೆ ಗೌರವ ಡಾಕ್ಟರೇಟ್ (Doctorate) ಪ್ರದಾನ ಮಾಡಲಾಯಿತು. ಪೀಠಾಧಿಪತಿ ಸುಬುಧೇಂದ್ರ ತೀರ್ಥರವರಿಂದ ಗೌರವ ಸ್ವೀಕರಿಸಿದ ಅವರು ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದೇ ವೇಳೆ ರಾಯರ ಅನುಗ್ರಹ ಪ್ರಶಸ್ತಿಯೂ ನೀಡಿ ಸನ್ಮಾನಿಸಲಾಯಿತು.

ಅಮೆರಿಕದ ಫ್ಲೋರಿಡಾದ ಯೋಗ ಸಂಸ್ಕೃತಂ ವಿಶ್ವವಿದ್ಯಾಲಯದಿಂದ ಈ ಗೌರವ ಲಭಿಸಿದ್ದು, ಚಿತ್ರರಂಗದಲ್ಲಿನ ಅವರ ಕೊಡುಗೆಯನ್ನು ಗುರುತಿಸಿ ನೀಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಗೌರವ ರಾಯರ ಪಾದಕ್ಕೆ ಅರ್ಪಣೆ

ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, “ಡಾಕ್ಟರೇಟ್ ಪದವಿ ಸಿಕ್ಕಿದ್ದು ನನಗೆ ದೊಡ್ಡ ಪುಣ್ಯ. ಇದನ್ನು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಅರ್ಪಿಸುತ್ತೇನೆ,” ಎಂದು ಭಾವುಕರಾದರು.

ತಂದೆ ಡಾ. ರಾಜ್‌ಕುಮಾರ್ ಮಂತ್ರಾಲಯ ಸಿನಿಮಾ ಮಾಡುತ್ತಿದ್ದ ಸಮಯದಲ್ಲಿ ತಾನು ಹುಟ್ಟಿದ್ದು, ಅದಕ್ಕೇ ರಾಘವೇಂದ್ರ ಎಂಬ ಹೆಸರು ಬಂದಿತು ಎಂದು ಅವರು ಸ್ಮರಿಸಿದರು. “ಈಗ ಡಾಕ್ಟರೇಟ್ ಸಿಕ್ಕಿರುವುದು ನನ್ನ ಮೇಲೆ ಮತ್ತಷ್ಟು ಜವಾಬ್ದಾರಿ ತಂದಿದೆ. ಸಮಾಜ ಸೇವೆಯಲ್ಲಿ ಇನ್ನಷ್ಟು ತೊಡಗಿಕೊಳ್ಳಬೇಕು ಎನ್ನುವ ಭಾವ ಮೂಡಿದೆ,” ಎಂದರು.

ಅಭಿಮಾನಿಗಳ ಸಂಭ್ರಮ

ಕಾರ್ಯಕ್ರಮಕ್ಕೆ ಹಾಜರಾಗಿದ್ದ ಯುವ ರಾಜ್‌ಕುಮಾರ್ ಮತ್ತು ವಿನಯ್ ರಾಜ್‌ಕುಮಾರ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಸೆಲ್ಫಿಗಾಗಿ ನೂಕಾಟ, ತಳ್ಳಾಟ ನಡೆದಿದ್ದು, ಕೊನೆಗೆ ಇಬ್ಬರೂ ಅಭಿಮಾನಿಗಳಿಗೆ ಸೆಲ್ಫಿ ನೀಡಿ ತೆರಳಿದರು. ಕಾರ್ಯಕ್ರಮ ಸ್ಥಳದಲ್ಲಿ ಸಂಭ್ರಮದ ವಾತಾವರಣ ಕಂಡುಬಂತು.

ಮೂರು ದಶಕಗಳ ಸಿನಿ ಪಯಣ

1988ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಾಘವೇಂದ್ರ ರಾಜ್‌ಕುಮಾರ್, ಹಲವು ಸಿನಿಮಾಗಳಲ್ಲಿ ನಾಯಕನಾಗಿ ಮೆಚ್ಚುಗೆ ಪಡೆದಿದ್ದಾರೆ. ನಿರ್ಮಾಪಕರಾಗಿಯೂ ಅನೇಕ ಚಿತ್ರಗಳಿಗೆ ಕೈಜೋಡಿಸಿದ್ದಾರೆ.

2004ರ ನಂತರ ಆರೋಗ್ಯ ಸಮಸ್ಯೆಯಿಂದಾಗಿ ದೀರ್ಘ ವಿರಾಮ ತೆಗೆದುಕೊಂಡ ಅವರು, ಇದೀಗ ಪೋಷಕ ಪಾತ್ರಗಳ ಮೂಲಕ ಮತ್ತೆ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. 60ನೇ ವಯಸ್ಸಿನಲ್ಲಿಯೂ ಅವರ ಉತ್ಸಾಹ ಅಚಲವಾಗಿದೆ.

Ramya

Sub Editor, Cinema, Health & Lifestyle : 👤 Ramya is a journalist with five years of experience in… More »

Related Stories