ಆರಂಭದಲ್ಲಿ ಭರ್ಜರಿ ಗಳಿಕೆ ಕಂಡಿದ್ದ ‘ಟಾಕ್ಸಿಕ್’ ಸಿನಿಮಾ ಕಲೆಕ್ಷನ್ ಎಷ್ಟು! ಇಲ್ಲಿದೆ ವಿವರ
Toxic Box Office Collection: ಬಿಡುಗಡೆಯ ಆರಂಭದಲ್ಲಿ ಭರ್ಜರಿ ಗಳಿಕೆ ಕಂಡಿದ್ದ ‘ಟಾಕ್ಸಿಕ್’ ಸಿನಿಮಾ ಎರಡನೇ ವಾರಾಂತ್ಯದಲ್ಲೂ ಚೇತರಿಕೆ ಕಾಣಲಿಲ್ಲ. 12ನೇ ದಿನದ ಕಲೆಕ್ಷನ್ ಕುಸಿದಿದ್ದು, ಜಾಗತಿಕವಾಗಿ 337.80 ಕೋಟಿ ರೂಪಾಯಿ ಗಳಿಸಿದೆ.

- ಟಾಕ್ಸಿಕ್ ಗಳಿಕೆ: 12ನೇ ದಿನವೂ ನಿರೀಕ್ಷಿತ ಚೇತರಿಕೆ ಇಲ್ಲ
- ಬಾಕ್ಸ್ ಆಫೀಸ್: ಭಾರತದಲ್ಲಿ ₹245.75 ಕೋಟಿ ನೆಟ್
- ವಿಶ್ವಾದ್ಯಂತ ಕಲೆಕ್ಷನ್: ₹337.80 ಕೋಟಿ ಗ್ರಾಸ್
‘ಟಾಕ್ಸಿಕ್’ (Toxic Cinema) ಸಿನಿಮಾ ಬಿಡುಗಡೆಯಾದ ಆರಂಭಿಕ ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಸದ್ದು ಮಾಡಿತ್ತು. ಆದರೆ ಎರಡನೇ ವಾರಕ್ಕೆ ಕಾಲಿಟ್ಟ ಬಳಿಕ ಚಿತ್ರದ ಗಳಿಕೆಯಲ್ಲಿ ಗಣನೀಯ ಇಳಿಕೆ (Toxic Box Office Collection) ಕಂಡುಬಂದಿದೆ. ಪ್ರಮುಖ ವಾರಾಂತ್ಯವಾದ ಎರಡನೇ ಭಾನುವಾರವೂ ಕಲೆಕ್ಷನ್‌ನಲ್ಲಿ ದೊಡ್ಡ ಮಟ್ಟದ ಏರಿಕೆ ಕಾಣಿಸಿಕೊಳ್ಳದಿರುವುದು ಚಿತ್ರತಂಡಕ್ಕೆ ಹಿನ್ನಡೆಯಾಗಿದೆ.
12ನೇ ದಿನದ ಬಾಕ್ಸ್ ಆಫೀಸ್ (Box Office) ವರದಿಯ ಪ್ರಕಾರ, ಭಾರತದಲ್ಲಿ 1,677 ಶೋಗಳಿಂದ ಚಿತ್ರ ₹2.35 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ನೆಟ್ ಗಳಿಕೆ ₹245.75 ಕೋಟಿಗೆ ತಲುಪಿದೆ. ಭಾರತದಲ್ಲಿನ ಒಟ್ಟು ಗ್ರಾಸ್ ಕಲೆಕ್ಷನ್ ₹293.30 ಕೋಟಿಯಾಗಿದೆ.
ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರಕ್ಕೆ ನಿರೀಕ್ಷಿತ ವೇಗ ಸಿಕ್ಕಿಲ್ಲ. 12ನೇ ದಿನ ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಸುಮಾರು ₹50 ಲಕ್ಷ ಗಳಿಕೆಯಾಗಿದ್ದು, ಒಟ್ಟು ವಿದೇಶಿ ಗ್ರಾಸ್ ಕಲೆಕ್ಷನ್ ₹44.50 ಕೋಟಿಯಾಗಿದೆ. ಭಾರತ ಮತ್ತು ವಿದೇಶಿ ಮಾರುಕಟ್ಟೆಯ ಗಳಿಕೆಯನ್ನು ಸೇರಿಸಿದರೆ ಚಿತ್ರದ ಜಾಗತಿಕ ಗ್ರಾಸ್ ಕಲೆಕ್ಷನ್ (Worldwide Gross) ₹337.80 ಕೋಟಿಯಾಗಿದೆ.
ಮೊದಲ ವಾರದ ಅಂತ್ಯಕ್ಕೆ ಸಿನಿಮಾ ₹239.30 ಕೋಟಿ ಗಳಿಸಿತ್ತು. ಆದರೆ ಎರಡನೇ ವಾರದಲ್ಲಿ ಗಳಿಕೆಯ ವೇಗ ಗಮನಾರ್ಹವಾಗಿ ಕುಸಿದಿದೆ. 10ನೇ ದಿನವಾದ ಶುಕ್ರವಾರ ₹1.75 ಕೋಟಿ ಹಾಗೂ 11ನೇ ದಿನ ಶನಿವಾರ ₹2.28 ಕೋಟಿ ಗಳಿಸಿದ್ದ ಚಿತ್ರ, 12ನೇ ದಿನ ಭಾನುವಾರ ₹2.42 ಕೋಟಿ ಗಳಿಸಿದೆ.
ಭಾಷಾವಾರು ಕಲೆಕ್ಷನ್ ಗಮನಿಸಿದರೆ ಕನ್ನಡ ಆವೃತ್ತಿ 632 ಶೋಗಳಿಂದ ಶೇ.32ರ ಆಕ್ಯುಪೆನ್ಸಿಯೊಂದಿಗೆ ₹1.45 ಕೋಟಿ ಗಳಿಸಿದೆ. ಹಿಂದಿ ಆವೃತ್ತಿಯು 957 ಶೋಗಳಿಂದ ಶೇ.31ರ ಆಕ್ಯುಪೆನ್ಸಿಯೊಂದಿಗೆ ₹85 ಲಕ್ಷ ಗಳಿಸಿದೆ. ತೆಲುಗು ಆವೃತ್ತಿಯಿಂದ ₹9 ಲಕ್ಷ ಹಾಗೂ ತಮಿಳು ಆವೃತ್ತಿಯಿಂದ ₹3 ಲಕ್ಷ ಆದಾಯ ಬಂದಿದೆ.
ಎರಡನೇ ವಾರಾಂತ್ಯದಲ್ಲೂ ನಿರೀಕ್ಷಿತ ಮಟ್ಟದ ಪ್ರೇಕ್ಷಕರ ಬೆಂಬಲ ಸಿಗದಿರುವುದು ಚಿತ್ರದ ಮುಂದಿನ ಬಾಕ್ಸ್ ಆಫೀಸ್ ಪಯಣದ ಬಗ್ಗೆ ಪ್ರಶ್ನೆ ಮೂಡಿಸಿದೆ. ಸದ್ಯದ ವೇಗವನ್ನು ಗಮನಿಸಿದರೆ ‘ಟಾಕ್ಸಿಕ್’ ಜಾಗತಿಕವಾಗಿ ₹400 ಕೋಟಿ ಗಡಿ ದಾಟುವುದು ಕಷ್ಟವಾಗಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.


